ದೇಶ

ನಿಧಿ ಶೋಧನೆ: ಶೇಷಾಚಲಂ ಗುಡ್ದಗಳಲ್ಲಿ 80 ಅಡಿ ಸುರಂಗ ಕೊರೆದಿದ್ದ ಮಂಕು ನಾಯ್ಡು ಬಂಧನ!

Srinivas Rao BV

ತಿರುಪತಿ: ನಿಧಿ ಶೋಧನೆಗಾಗಿ ಶೇಷಾಚಲಂ ನ ಗುಡ್ಡಗಳಲ್ಲಿ ಒಂದು ವರ್ಷಗಳ ಅವಧಿಯಲ್ಲಿ 80 ಅಡಿ ಸುರಂಗ ಕೊರೆದಿದ್ದ 40 ವರ್ಷದ ವ್ಯಕ್ತಿಯನ್ನು ಹಾಗೂ 6 ಮಂದಿ ದಿನಗೂಲಿ ಕಾರ್ಮಿಕರನ್ನು ಅಲಿಪಿರಿ ಪೊಲೀಸರು ಬಂಧಿಸಿದ್ದಾರೆ. ತಿರುಪತಿಯ ಬಿಟಿಆರ್ ಕಾಲೋನಿಯ ಮಂಗಳಂ ನಲ್ಲಿರುವ ಶೇಷಾಚಲಂ ನ ಗುಡ್ಡದಲ್ಲಿ ಈ ವ್ಯಕ್ತಿಗಳು ನಿಧಿ ಶೋಧ ನಡೆಸುತ್ತಿದ್ದರು. 

ಅಲಿಪಿರಿ ಸರ್ಕಲ್ ಇನ್ಸ್ಪೆಕ್ಟರ್ ಬಿ.ದೇವೇಂದ್ರ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ನಿಧಿ ಶೋಧದಲ್ಲಿ ತೊಡಗಿದ್ದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನನ್ನು ವೃತ್ತಿಯಲ್ಲಿ ಪೇಂಟರ್ ಆಗಿದ್ದ ಮಂಕು ನಾಯ್ಡು ಎಂದು ಗುರುತಿಸಲಾಗಿದೆ. ಕಳೆದ ಒಂದು ವರ್ಷದಿಂದ ದಟ್ಟವಾದ ಅರಣ್ಯದ ನಡುವೆ ಇರುವ ಗುಡ್ಡದಲ್ಲಿ ನಿಧಿಗಾಗಿ ಶೋಧ ನಡೆಸಿ ಈ ಸುರಂಗ ಕೊರೆದಿದ್ದಾರೆ" ಎಂದು ಹೇಳಿದ್ದಾರೆ. 

ಭಾನುವಾರದಂದು ಒಂದಷ್ಟು ಮಂದಿ ಗುಡ್ಡದ ಬಳಿ ಹೋಗುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಅವರ ಚಲನವಲನಗಳ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಪಾಸಣೆ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎಂದು ಸಿಐ ತಿಳಿಸಿದ್ದಾರೆ. 

ಅಂಕಪಲ್ಲಿಯ ನಿವಾಸಿಯಾಗಿದ್ದ ನಾಯ್ಡು 2014 ರಲ್ಲಿ ತಿರುಪತಿಗೆ ಸ್ಥಳಾಂತರಗೊಂಡು ಪೇಂಟಿಂಗ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ. 

ನಿಧಿಯ ಶೋಧದಲ್ಲಿ ಆಸಕ್ತಿ ಹೊಂದಿದ್ದ ನಾಯ್ಡು ಸ್ವಯಂ ಘೋಷಿತ ದೇವಮಾನವ ರಾಮಯ್ಯ ಸ್ವಾಮಿ ಜೊತೆ ಶಾಮೀಲಾಗಿದ್ದ. ಸ್ವಯಂ ಘೋಷಿತ ದೇವಮಾನವ, ಶೇಷಾಚಲಂ ನ ಗುಡ್ಡಗಳಲ್ಲಿ ನಿಧಿ ಇರುವುದನ್ನು ತಾನು ಗ್ರಂಥಗಳಿಂದ ತಿಳಿದುಕೊಂಡಿದ್ದೇನೆ ಎಂದು ನಾಯ್ಡುಗೆ ನಂಬಿಸಿದ್ದ. ಸ್ಫೋಟಕಗಳನ್ನು ಬಳಕೆ ಮಾಡಿ ಇಬ್ಬರೂ ಸುರಂಗ ಕೊರೆಯುವುದಕ್ಕೆ ಒಂದು ವರ್ಷಗಳ ಹಿಂದೆ ಪ್ರಾರಂಭಿಸಿದ್ದರು. ಸ್ವಯಂ ಘೋಷಿತ ದೇವಮಾನವ 6 ತಿಂಗಳ ಹಿಂದೆ ಮೃತಪಟ್ಟಿದ್ದ, ಆದರೆ ನಾಯ್ಡು ಮಾತ್ರ ನಿಧಿ ಶೋಧ, ಸುರಂಗ ಕೊರೆಯುವುದನ್ನು ಮುಂದುವರೆಸಿದ್ದ.

SCROLL FOR NEXT