ದೇಶ

ಅತಂತ್ರ ಸ್ಥಿತಿ ನಿರ್ಮಾಣಕ್ಕೆ ಯತ್ನ; ಬಂಗಾಳ ರಾಜ್ಯಪಾಲರ ಬದಲಿಸಲು ಶಿವಸೇನೆ ಆಗ್ರಹ

Srinivasamurthy VN

ಮುಂಬೈ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಅತಂತ್ರಸ್ಥಿತಿ ನಿರ್ಮಾಣಕ್ಕೆ ರಾಜ್ಯಪಾಲರಾದ ಜಗದೀಪ್ ಧಂಕರ್ ಅವರು ಯತ್ನಿಸುತ್ತಿದ್ದು, ಕೂಡಲೇ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿವಸೇನೆ ಆಗ್ರಹಿಸಿದೆ.

ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಕುರಿತು ಬರೆದಿರುವ ಶಿವಸೇನೆ, ಬಂಗಾಳದಲ್ಲಿ ರಾಜಕೀಯ ಅತಂತ್ರಸ್ಥಿತಿ ನಿರ್ಮಾಣಕ್ಕೆ ರಾಜ್ಯಪಾಲರಾದ ಜಗದೀಪ್ ಧಂಕರ್ ನಿರಂತರವಾಗಿ ಯತ್ನಿಸುತ್ತಿದ್ದಾರೆ. ರಾಜ್ಯಪಾಲರ ಈ ನಡೆ ಸಾಂವಿಧಾನಿಕ ವಿರೋಧಿಯಾಗಿದ್ದು, ಅವರನ್ನು ಕೂಡಲೇ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಹೇಳಿದೆ. 

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಸಂಘರ್ಷ ಸಂಭವಿಸಿದ್ದು, ಇದರ ದುರ್ಲಾಭವನ್ನು ಪಡೆದುಕೊಳ್ಳಲು ಮತ್ತು ಆ ಮೂಲಕ ರಾಜ್ಯದಲ್ಲಿ ರಾಜಕೀಯ ಅತಂತ್ರ ಸ್ಥಿತಿ ನಿರ್ಮಿಸಲು ರಾಜ್ಯಪಾಲರು ಯತ್ನಿಸುತ್ತಿದ್ದಾರೆ. ಅಂತೆಯೇ ನಾರದ ಹಗರಣದಲ್ಲಿ ಟಿಎಂಸಿ ನಾಯಕರ ಬಂಧನವನ್ನೂ ಕೂಡ ಶಿವಸೇನೆ ರಾಜಕೀಯ ಷಡ್ಯಂತ್ರ ಎಂದು ಟೀಕಿಸಿದೆ.

2014ರಲ್ಲಿ ಪ್ರಸ್ತುತ ಬಂಧನಕ್ಕೀಡಾಗಿರುವ ನಾಯಕರಲ್ಲದೇ ಮತ್ತಿಬ್ಬರು ನಾಯಕರು ಕೂಡ ಲಂಚ ಪಡೆದು ಕ್ಯಾಮೆರಾಗೆ ಸಿಕ್ಕಿಬಿದಿದ್ದರು. ಅವರನ್ನೇಕೆ ಬಂಧಿಸಿಲ್ಲ ಎಂದು ಶಿವಸೇನೆ ಪ್ರಶ್ನಿಸಿದೆ. ಮುಕುಲ್ ರಾಯ್ ಮತ್ತು ಸುವೇಂದು ಅಧಿಕಾರಿ  ಈಗ ಬಿಜೆಪಿಯಲ್ಲಿದ್ದಾರೆ ಎಂದು ಅವರನ್ನು ಬಂಧಿಸುತ್ತಿಲ್ಲವೇ? ಬಿಜೆಪಿಗೆ ಸೇರಿದಾಕ್ಷಣ ಅವರು ಪವಿತ್ರರಾಗಿ ಮಮತಾ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದರೇ ಎಂದು ಶಿವಸೇನೆ ಪ್ರಶ್ನಿಸಿದೆ.

ಈ ಹಿಂದೆ ಬಂಗಾಳ ಚುನಾವಣೆ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಶಿವಸೇನೆ ತನ್ನ ಬೆಂಬಲ ಘೋಷಣೆ ಮಾಡಿತ್ತು. 

SCROLL FOR NEXT