ದೇಶ

ತರುಣ್ ತೇಜ್'ಪಾಲ್ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ತೀರ್ಪು ಪ್ರಕಟ ಮೇ 21ಕ್ಕೆ ಮುಂದೂಡಿಕೆ

Srinivasamurthy VN

ಪ್ಪರಕಣಜಿ: ತೆಹಲ್ಕಾದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ವಿರುದ್ಧದ ಸಹೋದ್ಯೋಗಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಗೋವಾ ಸೆಷನ್ಸ್ ಕೋರ್ಟ್ ಮೇ 21ಕ್ಕೆ ತೀರ್ಪು ಕಾಯ್ದಿರಿಸಿದೆ.

ತರುಣ್ ತೇಜ್‌ಪಾಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತೀರ್ಪನ್ನು ಇದೇ 21ರಂದು ಪ್ರಕಟಿಸುವುದಾಗಿ ಗೋವಾದ ಸೆಷನ್ಸ್ ನ್ಯಾಯಾಲಯವು ಬುಧವಾರ ಹೇಳಿದೆ. ಈ ವೇಳೆ ತರುಣ್‌ ತೇಜ್‌ಪಾಲ್‌ ತಮ್ಮ ಕುಟುಂಬದ ಕೆಲವು ಸದಸ್ಯರು ಮತ್ತು ವಕೀಲರೊಂದಿಗೆ ನ್ಯಾಯಾಲಯದಲ್ಲಿ  ಉಪಸ್ಥಿತರಿದ್ದರು.

ಪ್ರಕರಣದ ಅಂತಿಮ ಹಂತದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ ನ್ಯಾಯಧೀಶೆ ಕ್ಷಮಾ ಜೋಶಿ ಅವರು, ತಾಂತ್ರಿಕ ಕಾರಣಗಳಿಂದಾಗಿ ತೀರ್ಪನ್ನು ಮೇ 21ಕ್ಕೆ ಕಾಯ್ದಿರಿಸಲಾಗಿದೆ ಎಂದು ಹೇಳಿದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಕುರಿತು ಮಾಹಿತಿ ನೀಡಿದ ಪಬ್ಲಿಕ್‌ ಪ್ರಾಸಿಕ್ಯೂಟರ್‌  ಫ್ರಾನ್ಸಿಸ್ ತವೋರಾ ಅವರು, 'ವಿದ್ಯುತ್‌ ವೈಫಲ್ಯದಿಂದಾಗಿ ತೀ‍ರ್ಪು ನೀಡಲು ಸಾಧ್ಯವಾಗಿಲ್ಲ ಎಂದು ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ ನ್ಯಾಯಧೀಶೆ ಕ್ಷಮಾ ಜೋಶಿ ಹೇಳಿದ್ದಾರೆ ಎಂದು ತಿಳಿಸಿದರು.

ಮೂರನೇ ಬಾರಿಗೆ ತೀರ್ಪು ಮುಂದೂಡಿಕೆ
ಇನ್ನು ಪ್ರಕರಣದ ಕುರಿತು ಏಪ್ರಿಲ್ 27ರಂದು ತೀರ್ಪು ಪ್ರಕಟಿಸಬೇಕಿತ್ತು. ಆದರೆ ನ್ಯಾಯಾಧೀಶರು ತೀರ್ಪು ನೀಡುವ ದಿನಾಂಕವನ್ನು ಮೇ 12ಕ್ಕೆ ಮುಂದೂಡಿದ್ದರು. ಬಳಿಕ ಈ ದಿನಾಂಕವನ್ನು ಮೇ 19ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಸತತ ಮೂರನೇ ಬಾರಿ ನ್ಯಾಯಾಲಯವು ತೀರ್ಪನ್ನು ಮಂದೂಡಿದೆ. 'ಟೌಕ್ಟೇ'  ಚಂಡಮಾರುತದಿಂದಾಗಿ ಗೋವಾದ ಹಲವೆಡೆ ಭಾನುವಾರದಿಂದ ವಿದ್ಯುತ್‌ ವ್ಯತ್ಯಯ ಉಂಟಾಗಿದೆ. 

2013ರಲ್ಲಿ ಗೋವಾದ ಐಷಾರಾಮಿ ಹೋಟೆಲ್‌ನ ಲಿಫ್ಟ್‌ನೊಳಗೆ ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ತರುಣ್ ತೇಜ್ ಪಾಲ್ ಎದುರಿಸುತ್ತಿದ್ದಾರೆ. 2013ರ ನವೆಂಬರ್ 30ರಂದು ತೇಜ್ ಪಾಲ್ ರನ್ನು ಬಂಧಿಸಲಾಗಿತ್ತು. ಬಳಿಕ ತೇಜ್ ಪಾಲ್ ಜಾಮೀನಿನ ಮೇಲೆ  ಬಿಡುಗಡೆಯಾಗಿದ್ದರು. ಬಳಿಕ 2017 ಸೆಪ್ಟೆಂಬರ್ 29ರಂದು ಅತ್ಯಾಚಾರ, ಲೈಂಗಿಕ ದೌರ್ಜನ್ಯ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಗೋವಾ ಸೆಷನ್ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿತ್ತು.

ಈ ಪ್ರಕರಣದ ವಿರುದ್ಧ ತೇಜ್ ಪಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆಗಸ್ಟ್ ನಲ್ಲಿ ಈ ಪ್ರಕರಣದ ತನಿಖೆ  ನಡೆಸಿದ ಸುಪ್ರೀಂ ಕೋರ್ಟ್ ತೇಜ್ ಪಾಲ್ ಅರ್ಜಿ ವಜಾಗೊಳಿಸಿ, ಆರೋಪಗಳನ್ನು ಕೈ ಬಿಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಅಲ್ಲದೆ ಆರು ತಿಂಗಳೊಳಗೆ ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸುವಂತೆ ಗೋವಾ ಕೋರ್ಟ್ ಗೆ ಸೂಚಿಸಿತ್ತು.
 

SCROLL FOR NEXT