ದೇಶ

ಒಂದೇ ದಿನದಲ್ಲಿ ದಾಖಲೆಯ 20 ಲಕ್ಷ ಕೊರೋನಾ ವೈರಸ್ ಪತ್ತೆ ಪರೀಕ್ಷೆ; ಚೇತರಿಕೆ ಪ್ರಮಾಣ ಶೇ.86.23: ಆರೋಗ್ಯ ಸಚಿವಾಲಯ

Srinivas Rao BV

ನವದೆಹಲಿ: ದೇಶಾದ್ಯಂತ 24 ಗಂಟೆಗಳಲ್ಲಿ ದಾಖಲೆಯ 20 ಲಕ್ಷ ಕೊರೋನಾ ವೈರಾಣು ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ. ಇದು ಜಾಗತಿಕ ಮಟ್ಟದಲ್ಲಿ ದಾಖಲೆಯ ಸೋಂಕು ಪತ್ತೆ ಪರೀಕ್ಷೆಯ ಸಂಖ್ಯೆಯಾಗಿದ್ದು, ಭಾರತದಲ್ಲಿ ಒಂದೇ ದಿನ ನಡೆದ ಅತಿ ಹೆಚ್ಚಿನ ಪರೀಕ್ಷೆಯಾಗಿದೆ. 

ದಿನನಿತ್ಯದ ಸೋಂಕು ವರದಿಯ ಪ್ರಮಾಣ ಶೇ.13.31 ಕ್ಕೆ ಕುಸಿತ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಹೊಸ ಪ್ರಕರಣಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಚೇತರಿಕೆ ಕಾಣುತ್ತಿರುವುದು ಸತತ 6 ನೇ ದಿನವೂ ಮುಂದುವರೆದಿದೆ ಎಂದು ಹೇಳಿದೆ. 

ಈ ವರೆಗೂ ಒಟ್ಟು 2,19,86,363 ಮಂದಿ ಚೇತರಿಕೆ ಕಂಡಿದ್ದು, 3,89,851 ರೋಗಿಗಳು ದಿನವೊಂದಕ್ಕೆ ಚೇತರಿಕೆ ಕಾಣುತ್ತಿದ್ದು ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ.86.23 ರಷ್ಟಿದೆ. ಈ ವರೆಗೂ ದೇಶಾದ್ಯಂತ 32 ಕೋಟಿ ಟೆಸ್ಟ್ ಗಳನ್ನು ಮಾಡಲಾಗಿದ್ದು, ಒಟ್ಟು ಪಾಸಿಟಿವಿಟಿ ಪ್ರಮಾಣ ಶೇ.7.96 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ. 

ಸತತ ಮೂರನೇ ದಿನವೂ 3 ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ದೇಶದಲ್ಲಿ ವರದಿಯಾಗಿದೆ. ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಉತ್ತರ ಪ್ರದೇಶ, ರಾಜಸ್ಥಾನ, ಹರ್ಯಾಣಗಳಲ್ಲಿ ದೇಶದ ಶೇ.74.46 ಕೊರೋನಾ ಪ್ರಕರಣಗಳಿದ್ದು, 24 ಗಂಟೆಗಳಲ್ಲಿ 2,67,334  ಪ್ರಕರಣಗಳು ವರದಿಯಾಗಿವೆ, ತಮಿಳುನಾಡಿನಲ್ಲಿ ಅತಿ ಹೆಚ್ಚು ಅಂದರೆ ದಿನವೊಂದಕ್ಕೆ 33,059, ಕೇರಳದಲ್ಲಿ 31,337 ಹೊಸ ಪ್ರಕರಣಗಳು ವರದಿಯಾಗಿವೆ. 

SCROLL FOR NEXT