ದೇಶ

ಟೌಕ್ಟೇ ಚಂಡಮಾರುತ: ಬಾರ್ಜ್ ನಲ್ಲಿದ್ದ 37 ಮಂದಿ ಸಾವು, 38 ಮಂದಿ ಕಣ್ಮರೆ, ನೌಕಾಪಡೆಯಿಂದ ಶೋಧ ಮುಂದುವರಿಕೆ

Sumana Upadhyaya

ಮುಂಬೈ: ನಾಲ್ಕು ದಿನಗಳ ಹಿಂದೆ ಅರಬ್ಬೀ ಸಮುದ್ರದಲ್ಲಿ ಟೌಕ್ಟೇ ಚಂಡಮಾರುತದ ರಭಸವಾದ ಅಲೆಗೆ ಸಿಲುಕಿ ನಾವೆ ಮುಳುಗಿ ಹೋಗಿ 38 ಮಂದಿ ಕಣ್ಮರೆಯಾಗಿದ್ದು ಭಾರತೀಯ ನೌಕಾಪಡೆ ಸಿಬ್ಬಂದಿ ರಾತ್ರಿ ಹಗಲು ಸತತವಾಗಿ ಹುಡುಕಾಟ ನಡೆಸಿದರೂ ಮುಳುಗಿಹೋದವರ ಪತ್ತೆ ಸಿಗುವ ಸಾಧ್ಯತೆ ದುರ್ಬಲವಾಗಿದೆ.

ಇಂದು ಬೆಳಗ್ಗೆ ನೌಕಾಪಡೆ ಸಿಬ್ಬಂದಿ ಹೊಸದಾಗಿ ವೈಮಾನಿಕ ಶೋಧ ಕಾರ್ಯ ಆರಂಭಿಸಿದರು. ಮುಂಬೈ ತೀರದಲ್ಲಿ ಹೆಲಿಕಾಪ್ಟರ್ ಗಳ ಮೂಲಕ ಶೋಧ ಕಾರ್ಯ ಆರಂಭಿಸಿದ್ದರು. ಕಳೆದ ಸೋಮವಾರ ಪಿ305 ದೋಣಿ ಮುಳುಗಿಹೋಗಿತ್ತು.

ನಾವೆಯಲ್ಲಿದ್ದ 37 ಮಂದಿ ಸಿಬ್ಬಂದಿ ಸಮುದ್ರದ ಅಲೆಯಲ್ಲಿ ಮುಳುಗಿ ಮೃತಪಟ್ಟಿದ್ದು, 38 ಮಂದಿ ಕಣ್ಮರೆಯಾಗಿದ್ದಾರೆ. ತೀವ್ರ ಪ್ರತಿಕೂಲ ಹವಾಮಾನದಲ್ಲಿಯೂ ನೌಕಾಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇದುವರೆಗೆ ನಾವೆಯಲ್ಲಿದ್ದ 186 ಮಂದಿಯನ್ನು ಕಾಪಾಡಿದ್ದು, ಒಟ್ಟು 261 ಸಿಬ್ಬಂದಿ ಪಿ305ಯಲ್ಲಿ ಇದ್ದರು, ಇಬ್ಬರು ಸಿಬ್ಬಂದಿ ವರಪ್ರದ ಟಗ್ ಬೋಟ್ ನಲ್ಲಿಂದ ಸೇರಿದ್ದರು.

ಸಮುದ್ರ ನೀರಿನಲ್ಲಿ ಮುಳುಗಿ ಮೃತಪಟ್ಟವರ ದೇಹಗಳನ್ನು ಐಎನ್ ಎಸ್ ಕೊಚ್ಚಿ ಮತ್ತು ಐಎನ್ ಎಸ್ ಕೋಲ್ಕತ್ತಾ ಮುಂಬೈಗೆ ಕರೆತಂದಿದೆ ಎಂದು ನೌಕಾಪಡೆ ವಕ್ತಾರ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇನ್ನಷ್ಟು ಮಂದಿ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ಟೌಕ್ಟೇ ಚಂಡಮಾರುತ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡಿದ್ದರೂ ನಾವೆಯಲ್ಲಿ ಅಪಾಯಕಾರಿ ಪ್ರದೇಶದಲ್ಲಿ ಜನರು ಏಕೆ ಇದ್ದರು ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

SCROLL FOR NEXT