ದೇಶ

'ನಾರದ ಸ್ಟಿಂಗ್ ಆಪರೇಷನ್' ಕೇಸು: ನಾಲ್ವರು ರಾಜಕೀಯ ನಾಯಕರ ಗೃಹ ಬಂಧನಕ್ಕೆ ಕೋಲ್ಕತ್ತಾ ಹೈಕೋರ್ಟ್ ಆದೇಶ 

Sumana Upadhyaya

ಕೋಲ್ಕತ್ತಾ: ನಾರದ ಸುದ್ದಿವಾಹಿನಿಯ ರಹಸ್ಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದು ನ್ಯಾಯಾಂಗ ಬಂಧನದಲ್ಲಿರುವ ಪಶ್ಚಿಮ ಬಂಗಾಳ ಸರ್ಕಾರದ ಇಬ್ಬರು ಸಚಿವರು ಸೇರಿದಂತೆ ನಾಲ್ವರು ರಾಜಕೀಯ ಮುಖಂಡರನ್ನು ಗೃಹ ಬಂಧನದಲ್ಲಿರಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ.

ಕೋಲ್ಕತ್ತಾ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ನೇತೃತ್ವದ ವಿಭಾಗೀಯ ಪೀಠದ ನ್ಯಾಯಾಧೀಶರು ಇಂದು ವಿಚಾರಣೆ ನಡೆಸಿತು. ಪಶ್ಚಿಮ ಬಂಗಾಳ ಸಚಿವರಾದ ಸುಬ್ರತ ಮುಖರ್ಜಿ, ಫಿರ್ಹಾದ್ ಹಕಿಮ್, ಟಿಎಂಸಿ ಶಾಸಕರಾದ ಮದನ್ ಮಿತ್ರ ಮತ್ತು ಕೋಲ್ಕತ್ತಾ ಮಾಜಿ ಮೇಯರ್ ಸೊವನ್ ಚಟರ್ಜಿ ಅವರಿಗೆ ಸಿಬಿಐ ವಿಶೇಷ ಕೋರ್ಟ್ ನೀಡಿದ್ದ ಜಾಮೀನಿಗೆ ತಂದಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಬಗ್ಗೆ ವಿಭಿನ್ನ ನಿಲುವು ತಳೆದರು.

ವಿಭಾಗೀಯ ಪೀಠದಲ್ಲಿರುವ ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ, ಇದುವರೆಗೆ ನ್ಯಾಯಾಂಗ ಬಂಧನದಲ್ಲಿರುವ ನಾಲ್ವರು ನಾಯಕರನ್ನು ಗೃಹ ಬಂಧನದಲ್ಲಿ ಸದ್ಯಕ್ಕೆ ಇರಿಸುವಂತೆ ಆದೇಶ ಹೊರಡಿಸಿದರು.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಅವರ ಮಧ್ಯೆ ಪ್ರಕರಣ ಕುರಿತು ವಿಭಿನ್ನ ಅಭಿಪ್ರಾಯ ಇರುವುದರಿಂದ ವಿವಿಧ ಪೀಠಕ್ಕೆ ಪ್ರಕರಣವನ್ನು ಉಲ್ಲೇಖಿಸಲು ವಿಭಾಗೀಯ ಪೀಠ ನಿರ್ಧರಿಸಿತು.

ನಾಯಕರ ಗೃಹ ಬಂಧನ ಕುರಿತು ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದ್ದು ವಾದ-ಪ್ರತಿವಾದಗಳನ್ನು ಆಲಿಸಲಾಗುತ್ತಿದೆ.

ಸಿಬಿಐ ಪರ ವಾದ ಮಂಡಿಸಿದ ಸೊಲಿಸಿಟರ್ ಜನರಲ್ ತುಷಾರ್ ಮೆಹ್ತ, ಆದೇಶ ಹೊರಡಿಸುವುದಕ್ಕೆ ಸದ್ಯಕ್ಕೆ ತಡೆ ನೀಡುವಂತೆ ಕೋರಿದರು.

ಕಳೆದ ಸೋಮವಾರ ಬೆಳಗ್ಗೆ ಸಿಬಿಐ ನಾಲ್ವರು ನಾಯಕರನ್ನು ಬಂಧಿಸಿತ್ತು. ಕೆಳ ನ್ಯಾಯಾಲಯ ನಾಲ್ವರಿಗೂ ಜಾಮೀನು ನೀಡುವ ನಿರ್ಧಾರಕ್ಕೆ ಹೈಕೋರ್ಟ್ ಕಳೆದ ಸೋಮವಾರ ರಾತ್ರಿ ತಡೆಯಾಜ್ಞೆ ನೀಡಿತ್ತು.

SCROLL FOR NEXT