ದೇಶ

ದೇಶದ್ರೋಹ ಪ್ರಕರಣ: ವೈಎಸ್ಆರ್ ಕಾಂಗ್ರೆಸ್ ಬಂಡಾಯ ಸಂಸದನಿಗೆ ಸುಪ್ರೀಂನಿಂದ ಜಾಮೀನು

Lingaraj Badiger

ನವದೆಹಲಿ: ದೇಶದ್ರೋಹ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ವೈಎಸ್ಆರ್ ಕಾಂಗ್ರೆಸ್ ಬಂಡಾಯ ಸಂಸದ ಕೆ.ರಘು ರಾಮಕೃಷ್ಣ ರಾಜು ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.

ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ಬಿ ಆರ್ ಗವಾಯಿ ಅವರ ರಜೆ ಪೀಠ, ಸಿಕಂದರಾಬಾದ್‌ನ ಸೇನಾ ಆಸ್ಪತ್ರೆಯಲ್ಲಿರುವ ರಾಜು ಅವರ ವೈದ್ಯಕೀಯ ವರದಿಯನ್ನು ಉಲ್ಲೇಖಿಸಿ ಜಾಮೀನು ನೀಡಿದೆ.

ರಾಜು ಅವರಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮಾಧ್ಯಮಗಳಿಗೆ ಯಾವುದೇ ಸಂದರ್ಶನವನ್ನು ನೀಡುವಂತಿಲ್ಲ ಎಂದು ಹೇಳಿದೆ.

ಮುಂದಿನ ಆದೇಶದವರೆಗೂ ರಾಜು ಅವರನ್ನು ನೆರೆಯ ತೆಲಂಗಾಣದ ಸಿಕಂದರಾಬಾದ್‌ನ ಸೇನಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವಂತೆ ಮೇ 17 ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.

ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಕೆ.ರಘು ರಾಮಕೃಷ್ಣ ರಾಜು ಅವರ ವಿರುದ್ಧ ಆಂಧ್ರ ಪ್ರದೇಶದ ಅಪರಾಧ ತನಿಖಾ ಇಲಾಖೆ(ಸಿಐಡಿ) ದೇಶದ್ರೋಹ ಪ್ರಕರಣ ದಾಖಲಿಸಿದೆ.

SCROLL FOR NEXT