ದೇಶ

ಮೆಹುಲ್ ಚೋಕ್ಸಿ ನಿಗೂಢ ಕಣ್ಮರೆ: ಅಂಟಿಗುವಾ ರಾಯಭಾರ ಕಚೇರಿಯಿಂದ ಮಾಹಿತಿ ಕೇಳಿದ ಸಿಬಿಐ

Srinivasamurthy VN

ನವದೆಹಲಿ: ಬಹುಕೋಟಿ ಪಿಎನ್‍ಬಿ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಅಂಟಿಗುವಾ ಮತ್ತು ಬರ್ಬುಡಾ ದೇಶದಲ್ಲಿ ನಿಗೂಢವಾಗಿ ಕಣ್ಮರೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಟಿಗುವಾ ರಾಯಭಾರ ಕಚೇರಿಯಿಂದ ಸಿಬಿಐ ಮಾಹಿತಿ ಕೇಳಿದೆ.

ಮೂಲಗಳ ಪ್ರಕಾರ, ಸಿಬಿಐ ಭಾರತದ ಆಂಟಿಗುವಾ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದು, ಮೆಹುಲ್ ಚೋಕ್ಸಿ ಕಾಣೆಯಾದ ವರದಿಗಳು ಮತ್ತು ಈ ವಿಷಯಕ್ಕೆ ಸಂಬಂಧಿಸಿದ ಇತರೆ ವಿವರಗಳ ಬಗ್ಗೆ ದೃಢೀಕರಣವನ್ನು ಕೋರಿದೆ. ಅಂತೆಯೇ ಸಿಬಿಐ ಈ ವಿಷಯದ ಸಂಗತಿಗಳನ್ನು ಪರಿಶೀಲಿಸುತ್ತಿದೆ ಎಂದು  ಹೇಳಲಾಗಿದೆ.

62 ವರ್ಷದ ಮೆಹುಲ್ ಚೋಕ್ಸಿ ಅಂಟಿಗುವಾ ಮತ್ತು ಬರ್ಬುಡಾ ದೇಶದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದರು. ನಾಪತ್ತೆಯಾಗಿರುವ ಚೋಕ್ಸಿಗಾಗಿ ಅಲ್ಲಿನ ಪೊಲೀಸರು ಕಳೆದ ಭಾನುವಾರದಿಂದ ಹುಡುಕಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಂಟಿಗುವಾದ ಮಾಧ್ಯಮವೊಂದು ವರದಿ ಮಾಡಿದೆ.

ಭಾರತೀಯ ಮೂಲದ ಉದ್ಯಮಿ ಚೋಕ್ಸಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಅಂಟಿಗುವಾದ ಪೊಲೀಸ್ ಮುಖ್ಯಸ್ಥ ಅಟ್ಲೇ ರೋಡ್ನಿ ತಿಳಿಸಿದ್ದಾರೆ. ಕೆರೆಬಿಯನ್ ದ್ವೀಪ ರಾಷ್ಟ್ರವಾದ ಅಂಟಿಗುವಾ ಹಾಗೂ ಬರ್ಬುಡಾದ ನಾಗರಿಕತ್ವ ಪಡೆದುಕೊಂಡಿರುವ ಕಳೆದ ಭಾನುವಾರ ವಾಹನದಲ್ಲಿ ತೆರಳುತ್ತಿರುವುದನ್ನು  ಕೆಲವರು ನೋಡಿದ್ದಾರೆ. ನಂತರ ಅವರು ಸಂಚರಿಸುತ್ತಿದ್ದ ವಾಹನ ಪತ್ತೆಯಾಗಿದೆ ಆದರೆ, ಅವರು ನಿಗೂಢವಾಗಿ ನಾಪತ್ತೆಯಾಗಿರುವುದು ಕುತೂಹಲ ಕೆರಳಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನೀರವ್ ಮೋದಿ ಹಾಗೂ ಚೋಕ್ಸಿ ಅವರು 13,500 ಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಲಂಡನ್‍ನಲ್ಲಿ ಬಂಧಿತರಾಗಿರುವ ನಿರವ್ ಮೋದಿ ಅವರನ್ನು ಅಲ್ಲಿನ ನ್ಯಾಯಾಲಯ ಭಾರತಕ್ಕೆ ಗಡಿಪಾರು ಮಾಡಿದೆ. ಗಡಿಪಾರು ರದ್ದುಗೊಳಿಸುವಂತೆ  ಮೋದಿ ಮಾಡಿಕೊಳ್ಳುತ್ತಿರುವ ಮನವಿಗೆ ಪುರಸ್ಕಾರ ದೊರೆಯದ ಹಿನ್ನಲೆಯಲ್ಲಿ ಅವರು ಲಂಡನ್ ಜೈಲಿನಲ್ಲಿದ್ದಾರೆ. ಅದೇ ರೀತಿ 2018ರಲ್ಲಿ ಅಂಟಿಗುವಾ ಪೌರತ್ವ ಪಡೆದು ಅಲ್ಲೇ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ಚೋಕ್ಸಿ ಕಣ್ಮರೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
 

SCROLL FOR NEXT