ದೇಶ

ರೈತರ ಪ್ರತಿಭಟನೆಗೆ ಆರು ತಿಂಗಳು: ಕರಾಳ ದಿನಾಚರಣೆಗೆ ಸಜ್ಜು, ಜನ ಗುಂಪಾಗಿ ಸೇರದಂತೆ ದೆಹಲಿ ಪೊಲೀಸರ ಎಚ್ಚರಿಕೆ!

Nagaraja AB

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಗೆ ಆರು ತಿಂಗಳು ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಬುಧವಾರ ಕರಾಳ ದಿನವನ್ನಾಗಿ ಆಚರಿಸಲು ರೈತ ಸಂಘಟನೆಗಳು ಮುಂದಾಗಿರುವಂತೆಯೇ, ಕೋವಿಡ್ ಪರಿಸ್ಥಿತಿ ಹಾಗೂ ಲಾಕ್ ಡೌನ್ ಕಾರಣದಿಂದಾಗಿ ಜನರು ಗುಂಪಾಗಿ ಸೇರದಂತೆ ದೆಹಲಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ನಗರದ ಗಡಿಗಳಲ್ಲಿನ ಪ್ರತಿಭಟನಾ ಸ್ಥಳದಲ್ಲಿ ಯಾವುದೇ ಪರಿಸ್ಥಿತಿ ನಿಭಾಯಿಸಲು ಬಿಗಿ ಜಾಗ್ರತೆ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಾನೂನು ಕೈಗೆತ್ತಿಕೊಳ್ಳಲು ಪ್ರಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಪೊಲೀಸ್ ಪಿಆರ್ ಒ ಚಿನ್ಮೊಯ್ ಬಿಸ್ವಾಲ್ ಹೇಳಿದ್ದಾರೆ. ಸಿಂಘು, ಟಿಕ್ರಿ ಮತ್ತು ಘಾಜಿಪುರ ಪ್ರತಿಭಟನಾ ಸ್ಥಳಗಳು ಸೇರಿದಂತೆ ಎಲ್ಲಾ ಗಡಿಗಳಲ್ಲಿ ಈಗಾಗಲೇ ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಅಕ್ರಮ ಚಟುವಟಿಕೆ ಅಥವಾ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ರೈತರ ಪ್ರತಿಭಟನೆಗೆ ಆರು ತಿಂಗಳು ತುಂಬಲಿರುವ ಹಿನ್ನೆಲೆಯಲ್ಲಿ ಮೇ 26 ರಂದು ಕರಾಳ ದಿನವನ್ನಾಗಿ ಆಚರಿಸಲಾಗುವುದು ಎಂದು
ಸಂಯುಕ್ತ ಕಿಶಾನ್ ಮೋರ್ಚಾ ಹೇಳಿತ್ತು. ಕಾಂಗ್ರೆಸ್, ಟಿಎಂಸಿ, ಎಡ ಪಕ್ಷಗಳು, ಎಸ್ ಪಿ, ಎನ್ ಸಿಪಿ ಮತ್ತು ಡಿಎಂಕೆ ಸೇರಿದಂತೆ ಪ್ರಮುಖ 12 ಪ್ರತಿಪಕ್ಷಗಳು ಕಳೆದ ವಾರ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದವು.

ಸಂಯುಕ್ತ ಕಿಶಾನ್ ಮೋರ್ಚಾ ಪ್ರಕಟಣೆ ಹಿನ್ನೆಲೆಯಲ್ಲಿ ಜನರು ಕೋವಿಡ್ ನಿಯಮಗಳನ್ನು ಪಾಲಿಸುವಂತೆ, ಮನೆಗಳಿಂದ ಹೊರಗೆ ಬಾರದಂತೆ, ರಾಷ್ಟ್ರ ರಾಜಧಾನಿಯಲ್ಲಿ ಸದ್ಯ ಕೊರೋನಾ ಪರಿಸ್ಥಿತಿಯಿಂದಾಗಿ ಅನಗತ್ಯವಾಗಿ ಗುಂಪು ಸೇರಿದಂತೆ ದೆಹಲಿ ಪೊಲೀಸರು ಮಂಗಳವಾರ ಹೇಳಿದ್ದಾರೆ. 

ಸತ್ಯ ಮತ್ತು ಅಹಿಂಸೆ ಆಧಾರದ ಮೇಲೆ ರೈತರ ಪ್ರತಿಭಟನೆ ನಡೆಯುತ್ತಿದ್ದು, ಬುಧವಾರ ನಮ್ಮ ಚಾರಿತ್ರಿಕ ಹೋರಾಟಕ್ಕೆ ಆರು ತಿಂಗಳು ತುಂಬಲಿದೆ. ನಾಳೆ ಬುದ್ಧ ಪೂರ್ಣಿಮೆ ಅಂಗವಾಗಿ ಎಲ್ಲಾ ಭಾರತೀಯರು ಆಚರಿಸುವಂತೆ ಮನವಿ ಮಾಡುತ್ತೇವೆ ಎಂದು ಸಂಯುಕ್ತ ಕಿಶಾನ್ ಮೋರ್ಚಾ ಹೇಳಿಕೆ ಬಿಡುಗಡೆ ಮಾಡಿದೆ.

ಕರಾಳ ದಿನದ ಅಂಗವಾಗಿ ಮನೆಗಳು, ವಾಹನಗಳು, ಮತ್ತಿತರ ಕಡೆಗಳಲ್ಲಿ ಕಪ್ಪು ಬಾವುಟ ಹಾರಿಸಬೇಕೆಂದು ಎಲ್ಲಾ ಜನರಲ್ಲಿ ಸಂಯುಕ್ತ ಕಿಶಾನ್ ಮೋರ್ಚಾ ಮನವಿ ಮಾಡಿದೆ. ಬುಧವಾರ ರೈತರು ಕಪ್ಪು ಟರ್ಬನ್ ಮತ್ತು ಕಪ್ಪು ಚುನ್ನಿ ಧರಿಸುವಂತೆ ರೈತ ಮುಖಂಡರು ಹೇಳಿದ್ದಾರೆ.

SCROLL FOR NEXT