ದೇಶ

ಐಸಿಎಂಆರ್ ಅನುಮೋದಿತ ಲ್ಯಾಬ್ ಗಳಲ್ಲಿ ಮಾತ್ರ ಕೋವಿಡ್ ಪರೀಕ್ಷೆ ಮಾಡಿಸಿ: ಮುಂಬೈ ಪೊಲೀಸ್ ಆಯುಕ್ತ

Lingaraj Badiger

ಮುಂಬೈ: ಸೈಬರ್ ಅಪರಾಧಿಗಳು ತಾವು ಲ್ಯಾಬ್‌ಗಳ ಉದ್ಯೋಗಿಗಳೆಂದು ಹೇಳಿಕೊಂಡು ನಕಲಿ ವರದಿಗಳನ್ನು ನೀಡುವ ಮೂಲಕ ಸಾಂಕ್ರಾಮಿಕ ರೋಗದ ಲಾಭ ಪಡೆದುಕೊಳ್ಳುತ್ತಿರುವುದರಿಂದ ಐಸಿಎಂಆರ್ ಅನುಮೋದಿತ ಪ್ರಯೋಗಾಲಯಗಳಲ್ಲಿ ಮಾತ್ರ ಕೋವಿಡ್ -19 ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಗರೇಲ್ ಅವರು ಶುಕ್ರವಾರ ಜನತೆಗೆ ಮನವಿ ಮಾಡಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವ ಕಾರಣ, ಅನೇಕರು ಕೋವಿ-19 ಸಂಬಂಧಿತ ಪರೀಕ್ಷೆಗಳಿಗೆ ಖಾಸಗಿ ಲ್ಯಾಬ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

"ಅವರಲ್ಲಿ ಹಲವರು ತಮ್ಮ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳ ಮೂಲಕ ಹತ್ತಿರದ ಖಾಸಗಿ ಲ್ಯಾಬ್‌ಗಳಲ್ಲಿ ಆನ್‌ಲೈನ್ ಅಪಾಯಿಂಟ್ಮೆಂಟ್ ಅನ್ನು ಕಾಯ್ದಿರಿಸುತ್ತಾರೆ, ಈ ಮೂಲಕ ಸೈಬರ್ ಅಪರಾಧಿಗಳಿಗೆ ಮೋಸ ಮಾಡಲು ಅವಕಾಶವನ್ನು ನೀಡುತ್ತಾರೆ" ಎಂದು ಅವರು ಹೇಳಿದರು.

ಭಾರತೀಯ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಅನುಮೋದಿತ ಲ್ಯಾಬ್‌ಗಳಿಗೆ ಮಾತ್ರ ಹೋಗಿ ಅಥವಾ ಆನ್‌ಲೈನ್ ಅಪಾಯಿಂಟ್ಮೆಂಟ್ ಪಡೆಯುವಂತೆ ಅವರು ನಾಗರಿಕರಿಗೆ ಮನವಿ ಮಾಡಿದ್ದಾರೆ.

"ಟೆಸ್ಟಿಂಗ್ ಟೈಮ್ಸ್! ಕೋವಿಡ್ -19 ಪರೀಕ್ಷೆಗಳ ಬೇಡಿಕೆಯ ಹೆಚ್ಚಳದ ಲಾಭವನ್ನು ಪಡೆದುಕೊಳ್ಳುತ್ತಿರುವ ಸೈಬರ್ ಅಪರಾಧಿಗಳು, ಪರೀಕ್ಷೆಯನ್ನು ಒದಗಿಸುವ ಪರಿಚಿತ ಲ್ಯಾಬ್‌ಗಳೆಂದು ತೋರಿಸುತ್ತಿದ್ದಾರೆ ಮತ್ತು ಮಾದರಿಗಳನ್ನು ಸಂಗ್ರಹಿಸುವ ಮಟ್ಟಕ್ಕೆ ಹೋಗಿ ನಂತರ ಯಾವುದೇ ವರದಿ ನೀಡುವುದಿಲ್ಲ ಅಥವಾ ನಕಲಿ ವರದಿಗಳನ್ನು ನೀಡುತ್ತಾರೆ" ಎಂದು ಮುಂಬೈನ ಉನ್ನತ ಪೊಲೀಸ್ ಅಧಿಕಾರಿ ತಮ್ಮ ಅಧಿಕೃತ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಸೈಬರ್ ವಂಚಕರು ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಾರೆ ಮತ್ತು ಮಾದರಿಗಳನ್ನು ಸಂಗ್ರಹಿಸಲು ಮತ್ತು ರೋಗಿಗಳಿಗೆ ನೆಗಟಿವ್ ಅಥವಾ ನಕಲಿ ಪರೀಕ್ಷಾ ವರದಿಗಳನ್ನು ಕಳುಹಿಸುವ ಮೂಲಕ ಮೋಸ ಮಾಡಲು ಮನೆಗೆ ಭೇಟಿ ನೀಡುತ್ತಾರೆ ಎಂದು ಅವರು ಹೇಳಿದ್ದಾರೆ.

SCROLL FOR NEXT