ದೇಶ

ಆಘಾತಕಾರಿ ಸುದ್ದಿ: ಮೃತ 59 ವರ್ಷದ ವ್ಯಕ್ತಿಯಲ್ಲಿ ಹಳದಿ, ಕಪ್ಪು ಮತ್ತು ಬಿಳಿ ಶಿಲೀಂಧ್ರ!

Vishwanath S

ಘಜಿಯಾಬಾದ್: ಕಪ್ಪು, ಬಿಳಿ ಮತ್ತು ಹಳದಿ ಶಿಲೀಂಧ್ರ ಪತ್ತೆಯಾಗಿದ್ದ 59 ವರ್ಷದ ಕೊರೋನಾ ರೋಗಿಯು ಮೃತಪಟ್ಟಿದ್ದಾರೆ ಎಂದು ಚಿಕಿತ್ಸೆ ನೀಡಿದ ವೈದ್ಯರು ಶನಿವಾರ ತಿಳಿಸಿದ್ದಾರೆ.

'ಚಿಕಿತ್ಸೆ ಪಡೆಯುತ್ತಿದ್ದ ಕುನ್ವರ್ ಸಿಂಗ್ ಶುಕ್ರವಾರ ರಾತ್ರಿ 7.30ಕ್ಕೆ ಟಾಕ್ಸೆಮಿಯಾದಿಂದ ನಿಧನರಾಗಿದ್ದಾರೆ ಎಂದು ರಾಜ್ ನಗರ ಪ್ರದೇಶದ ಹರ್ಷ್ ಆಸ್ಪತ್ರೆಯ ಇಎನ್ ಟಿ(ಕಿವಿ, ಮೂಗು, ಗಂಟಲು) ತಜ್ಞ ಡಾ.ಬಿ.ಪಿ ತ್ಯಾಗಿ ಹೇಳಿದರು. 

"ಮೇ 24ರಂದು ಎಂಡೋಸ್ಕೋಪಿ ಸಮಯದಲ್ಲಿ ಬಿಳಿ ಮತ್ತು ಕಪ್ಪು ಶಿಲೀಂಧ್ರವನ್ನು ಹೊರತುಪಡಿಸಿ ಹಳದಿ ಶಿಲೀಂಧ್ರ ಸಹ ಪತ್ತೆಯಾಗಿತ್ತು ಎಂದು ತ್ಯಾಗಿ ಹೇಳಿದ್ದಾರೆ. ಏತನ್ಮಧ್ಯೆ, ಮುರಾದ್ ನಗರದ ತಮ್ಮ ಆಸ್ಪತ್ರೆಯಲ್ಲಿ 59 ವರ್ಷದ ಮತ್ತೊಬ್ಬ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಲ್ಲೂ ಹಳದಿ ಶಿಲೀಂಧ್ರ ಪತ್ತೆಯಾಗಿದೆ ಎಂದರು. 

ರಾಜೇಶ್ ಕುಮಾರ್ ಅವರ ಮೆದುಳಿನ ಬಳಿ ಶಿಲೀಂಧ್ರ ಪತ್ತೆಯಾಗಿದೆ. ಹೀಗಾಗಿ ಅವರ ದವಡೆಯ ಅರ್ಧ ಭಾಗವನ್ನು ತೆಗೆದುಹಾಕಲಾಗಿದೆ. ಇನ್ನು ರಾಜೇಶ್ ಗೆ ಟಾಕ್ಸೆಮಿಯಾ ಇದೆ. ಆದರೆ ಸೋಂಕಿನ ಮಟ್ಟವು ಕುನ್ವರ್ ಸಿಂಗ್ ಅವರಿಗಿರುವುದಕ್ಕಿಂತ ಕಡಿಮೆ ಇದೆ ಎಂದು ವೈದ್ಯರು ಹೇಳಿದರು. 

ಘಜಿಯಾಬಾದ್‌ನಲ್ಲಿ ಇದುವರೆಗೆ ಕೋವಿಡ್ -19ಗೆ 432 ಬಲಿಯಾಗಿದ್ದಾರೆ. ಅಲ್ಲದೆ 1,957 ಸಕ್ರಿಯ ಕೊರೊನಾವೈರಸ್ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.

SCROLL FOR NEXT