ದೇಶ

ಕೋವಿಡ್-19 ಸಂತ್ರಸ್ತರ ಮೃತ ದೇಹವನ್ನು ನದಿಗೆ ಹಾಕುತ್ತಿದ್ದ ಇಬ್ಬರ ಬಂಧನ

Srinivas Rao BV

ಬಲರಾಮ್ ಪುರ: ನದಿಯಲ್ಲಿ ಕೋವಿಡ್-19 ಸಂತ್ರಸ್ತರ ಮೃತ ದೇಹ ಹಾಕುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 

ಉತ್ತರ ಪ್ರದೇಶದ ಬಲರಾಮ್ ಪುರದಲ್ಲಿರುವ ರಾಪ್ಟಿ ನದಿ ಸೇತುವೆ ಮೇಲಿಂದ ಕೋವಿಡ್-19 ನಿಂದ ಮೃತಪಟ್ಟಿದ್ದ ವ್ಯಕ್ತಿಯ ಪಾರ್ಥಿವ ಶರೀರವನ್ನು ಎತ್ತಿ ನದಿಗೆ ಹಾಕಲು ಮುಂದಾಗಿದ್ದು ವಿಡಿಯೋದಲ್ಲಿ ದಾಖಲಾಗಿದೆ. 

ಟ್ವಿಟರ್ ನಲ್ಲಿ ಹೇಳಿಕೆ ಪ್ರಕಟಿಸಿರುವ ಬಲರಾಮ್ ಪುರದ ಪೊಲೀಸ್ ಅಧಿಕಾರಿ ಮೇ.25  ರಂದು ಕೋವಿಡ್-19 ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪ್ರೇಮ್ ನಾಥ್ ಮಿಶ್ರ ಮೇ.29 ರಂದು ಮೃತಪಟ್ಟಿದ್ದರು. ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸಿ ಅವರ ಮೃತ ದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿತ್ತು.

ಮೇ.29 ರಂದು ಪಿಪಿಇ ಧರಿಸಿದ್ದ ಇಬ್ಬರು ವ್ಯಕ್ತಿಗಳು ರಾಪ್ಟಿ ನದಿ ಸೇತುವೆಯಿಂದ ಮೃತ ದೇಹವನ್ನು ನದಿಗೆ ಎಸೆಯುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ. 

ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದ್ದ ಕೋವಿಡ್-19 ಸಂತ್ರಸ್ತ ವ್ಯಕ್ತಿಯ ಮೃತದೇಹವನ್ನೇ ನದಿಗೆ ಎಸೆಯಲಾಗಿದೆ ಎಂಬುದನ್ನು ಬಲರಾಮ್ ಪುರದ ಮುಖ್ಯ ಆರೋಗ್ಯಾಧಿಕಾರಿ ಸ್ಪಷ್ಟಪಡಿಸಿದ್ದಾರೆ. 
 

SCROLL FOR NEXT