ದೇಶ

ಗಡ್ಕರಿ ಉತ್ತಮ ವ್ಯಕ್ತಿ. ಆದರೆ, ಅವರಿರುವ ಪಕ್ಷ ಸರಿಯಲ್ಲ: ಮಹಾರಾಷ್ಟ್ರ ಸಚಿವ ಅಶೋಕ್ ಚವಾಣ್

Manjula VN

ಮುಂಬೈ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಕೊಂಡಾಡಿರುವ ಮಹಾರಾಷ್ಟ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್ ಅವರು, ಗಡ್ಕರಿ ಉತ್ತಮ ವ್ಯಕ್ತಿ. ಆದರೆ, ಅವರಿರುವ ಪಕ್ಷ ಸರಿಯಲ್ಲ ಎಂದು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಿತಿನ್ ಗಡ್ಕರಿಯವರೊಂದಿಗೆ ಸಾಕಷ್ಟು ಬಾರಿ ಮಾತನಾಡಿದ್ದೇನೆ. ಗಡ್ಕರಿಯವರು ದಕ್ಷ ಸಚಿವರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮೂಲಸೌಕರ್ಯಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿವೆ. ಆ ಸಮಸ್ಯೆಗಳನ್ನು ಗಡ್ಕರಿಯವರು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಅವರ ಕಾರ್ಯಗಳನ್ನು ಲೇಖನ ಅಥವಾ ಟ್ವೀಟ್ ಮೂಲಕ ನಾನು ಸಾಕಷ್ಟು ಬಾರಿ ಶ್ಲಾಘಿಸಿದ್ದೇನೆ. ಆದರೆ, ಹೊಗಳಿದ ಕೂಡಲೇ ಅವರನ್ನು ನಾನು ರಾಜಕೀಯ ಬೆಂಬಲಿಸುತ್ತೇನೆಂಬ ಅರ್ಥವಲ್ಲ. ಗಡ್ಕರಿಯವರು ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಗಡ್ಕರಿ ಒಬ್ಬ ಉತ್ತಮ ವ್ಯಕ್ತಿ ಆದರೆ, ಅವರಿರುವ ಪಕ್ಷ ಸರಿಯಲ್ಲ ಎಂದು ಹೇಳಿದ್ದಾರೆ. 

ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಎಲ್ಲಾ ಅಧಿಕಾರವನ್ನು ತನ್ನ ಬಳಯೇ ಇಟ್ಟುಕೊಂಡಿದೆ. ಆದರೆ, ಕೊರೋನಾ ಸಾಂಕ್ರಾಮಿಕ ರೋಗ ಬಂದ ಬಳಿಕ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಎನ್'ಡಿಎ ಸರ್ಕಾರದಲ್ಲಿ ನಿಮಗೆ ಇಷ್ಟವಾದ ಸಚಿವರು ಯಾರಾದರೂ ಇದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಒಳ್ಳೆಯ ಮಾತುಗಳು ಆಡಬೇಕೆಂಬ ಸಚಿವರೆಂದರೆ ಅದು ನಿತಿನ್ ಗಡ್ಕರಿಯವರು ಬಗ್ಗೆ ಮಾತ್ರ ಮಾತನಾಡಬಹುದು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಗಡ್ಕರಿಯವರು ಇತರೆ ಪಕ್ಷದ ನಾಯಕರೊಂದಿಗೆ ಮಾತನಾಡುತ್ತಾರೆಂದಿದ್ದಾರೆ. 

ನಿನ್ನೆಯಷ್ಟೇ ಕೇಂದ್ರದ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರ ಅಧಿಕಾರಕ್ಕೆ ಬಂದು 7 ವರ್ಷಗಳು ಕಳೆದಿದ್ದು, ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದ ಅಶೋಕ್ ಚವಾಣ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೊರೋನಾ ಸಾಂಕ್ರಾಮಿಕ ರೋಗ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದರು. 

SCROLL FOR NEXT