ದೇಶ

ಜೂನ್‌ನಲ್ಲಿ 12 ಕೋಟಿ ಡೋಸ್ ಸಿಗಲಿದೆ; ಕೊರೋನಾ ವ್ಯಾಕ್ಸಿನೇಷನ್ ಸಂಖ್ಯೆ ಹೆಚ್ಚಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ

Vishwanath S

ನವದೆಹಲಿ: ಭಾರತದಲ್ಲಿ ಜೂನ್ ತಿಂಗಳಲ್ಲಿ ಪ್ರತಿದಿನ ಸರಾಸರಿ ಸುಮಾರು 40 ಲಕ್ಷ ಕೋವಿಡ್ ಲಸಿಕೆ ಹಾಕಲಾಗುತ್ತದೆ. ಏಪ್ರಿಲ್ ಗೆ ಹೋಲಿಸಿದರೆ ಮೇನಲ್ಲಿ ವ್ಯಾಕ್ಸಿನೇಷನ್ ಪ್ರಮಾಣ ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಕ್ರಮವಾಗಿ 10 ಕೋಟಿ ಮತ್ತು 90 ಲಕ್ಷ ಡೋಸ್ ಲಭ್ಯವಿದ್ದು, ಇನ್ನು 1 ಕೋಟಿ ಸ್ಪುಟ್ನಿಕ್ ವಿ ಡೋಸ್ ಕೂಡ ಜೂನ್‌ನಲ್ಲಿ ಲಭ್ಯವಾಗಲಿದೆ ಎಂದು ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.

ಜೂನ್‌ನಲ್ಲಿ ಲಸಿಕೆ ಲಭ್ಯತೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವ್ಯಾಕ್ಸಿನೇಷನ್‌ನ ವೇಗವನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳನ್ನು ಸೂಚಿಸಿದೆ. ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮೇ ತಿಂಗಳಲ್ಲಿ 7,94,05,200 ಕೋಟಿ ಡೋಸ್ ಕೋವಿಡ್ ಲಸಿಕೆಗಳು ಲಭ್ಯವಿದ್ದು ಜೂನ್‌ನಲ್ಲಿ ಲಭ್ಯತೆ 11,95,70,000ಗೆ ಹೆಚ್ಚಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಖಾಸಗಿ ಆಸ್ಪತ್ರೆಗಳ ಜೊತೆಗೂಡಿ ಕೋವಿಡ್ ವ್ಯಾಕ್ಸಿನೇಷನ್ ವೇಗವನ್ನು ಹೆಚ್ಚಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.

ಸೋಮವಾರ ನಡೆದ ಪರಿಶೀಲನಾ ಸಭೆಯಲ್ಲಿ, ಕೇಂದ್ರದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ವ್ಯಾಕ್ಸಿನೇಷನ್ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿ ಲಸಿಕೆ ಪಡೆಯುವಂತೆ ಜನರಲ್ಲಿ ಜಾಗೃತಿ ಮೂಡಿಸಿ. ಜನರಿಗೆ ಹತ್ತಿರವಾಗುವಂತೆ ಸಮುದಾಯ ಸಭಾಂಗಣಗಳು, ನಿವಾಸಿಗಳ ಸಂಘ ಕಚೇರಿಗಳು, ಸ್ಥಳೀಯ ಶಾಲೆಗಳಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ವಿಶೇಷ ಅಗತ್ಯವಿರುವವರಿಗೆ ಮೊದಲ ಡೋಸ್ ನೀಡಲು ವ್ಯವಸ್ಥೆ ಮಾಡುವಂತೆ ರಾಜ್ಯಗಳಿಗೆ ಸೂಚಿಸಿದ್ದಾರೆ. 

ಮೇ ತಿಂಗಳ ಆರಂಭದಿಂದ ಯುವ ಜನತೆಗೆ ಲಸಿಕೆ ಅಭಿಯಾನ ಆರಂಭಿಸಿದ್ದರೂ ಸಹ, ಏಪ್ರಿಲ್‌ಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾವೈರಸ್ ವಿರುದ್ಧದ ಸರಾಸರಿ ದೈನಂದಿನ ವ್ಯಾಕ್ಸಿನೇಷನ್‌ಗಳು ಮೇ ತಿಂಗಳಲ್ಲಿ ಸುಮಾರು 40% ಕಡಿಮೆಯಾಗಿದೆ. ಏಪ್ರಿಲ್ 3 ಮತ್ತು 9ರ ನಡುವೆ, ಪ್ರತಿದಿನ ಸರಾಸರಿ 35,35,250 ಡೋಸ್ ಗಳನ್ನು ನೀಡಲಾಗುತ್ತಿತ್ತು. ಇನ್ನು ಏಪ್ರಿಲ್ 10ರಂದು 36,59,356ಕ್ಕೆ ತಲುಪಿದ್ದು ಇದುವರೆಗೆ ದೇಶದಲ್ಲಿ ಸಾಧಿಸಿದ ಗರಿಷ್ಠ ವ್ಯಾಕ್ಸಿನೇಷನ್ ಆಗಿತ್ತು. 

SCROLL FOR NEXT