ದೇಶ

ಪಂಜಾಬ್ ಕಾಂಗ್ರೆಸ್ ನಲ್ಲಿ ಮತ್ತೆ ಆಂತರಿಕ ಕಲಹ, ಛನ್ನಿ ವಿರುದ್ಧ ಸಿಧು ವಾಗ್ದಾಳಿ

Srinivas Rao BV

ಚಂಡೀಗಢ: ಪಂಜಾಬ್ ನಲ್ಲಿ ಮುಖ್ಯಮಂತ್ರಿ ಬದಲಾದರೂ ಸಹ ಚುನಾವಣೆ ಸನಿಹದಲ್ಲಿ ಆಡಳಿತಾರೂಢ ಕಾಂಗ್ರೆಸ್ ನ ಆಂತರಿಕ ಕಲಹ ಮುಗಿಯುವಂತೆ ಕಾಣುತ್ತಿಲ್ಲ.

ಚುನಾವಣೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಪಂಜಾಬ್ ಸಿಎಂ ಚರಣ್ ಜೀತ್ ಸಿಂಗ್ ಛನ್ನಿ ಹಲವು ಜನಪ್ರಿಯ ಘೋಷಣೆಗಳನ್ನು ಮಾಡಿದ್ದರು. 

ಈಗ ಸರ್ಕಾರದ ನಡೆಯನ್ನು ಕಾಂಗ್ರೆಸ್ ನ ಮುಖ್ಯಸ್ಥರಾಗಿರುವ ನವಜೋತ್ ಸಿಂಗ್ ಸಿಧು ತೀವ್ರವಾಗಿ ವಿರೋಧಿಸಿದ್ದು, ಚುನಾವಣೆಗೂ ಮುನ್ನ ಲಾಲಿಪಪ್ ಗಳನ್ನು ನೀಡುವ ರಾಜಕಾರಣಿಗಳನ್ನು ಟೀಕಿಸಿದ್ದು, ಪಂಜಾಬ್ ನ ಜನಕಲ್ಯಾಣವಾಗುವುದು ಮಾರ್ಗಸೂಚಿಗಳಿಂದಲೇ ಹೊರತು, ಚುನಾವಣೆಗಳ ಸಂದರ್ಭದಲ್ಲಿ ತಂತ್ರಗಳಿಂದ ಅಲ್ಲ ಎಂದು ಹೇಳಿದ್ದಾರೆ. 

ಸರ್ಕಾರಿ ಉದ್ಯೋಗಿಗಳಿಗೆ ತುಟ್ಟಿ ಭತ್ಯೆಯನ್ನು ಶೇ.11 ರಷ್ಟು ಏರಿಕೆ ಮಾಡಿ, ಗೃಹ ಉಪಯೋಗಿ ವಿದ್ಯುತ್ ಗೆ ಪ್ರತಿ ಯೂನಿಟ್ ಗೆ ರೂಪಾಯಿ 3 ರಷ್ಟು ಕಡಿತಗೊಳಿಸುವ ಘೋಷಣೆಯನ್ನು ಪ್ರಕಟಿಸಿದ್ದರು ಸಿಎಂ ಛನ್ನಿ. ಈ ಬೆನ್ನಲ್ಲೇ ಸರ್ಕಾರದ ನಡೆಯನ್ನು ಸಿಧು ಟೀಕಿಸಿದ್ದಾರೆ.

ಕೊನೆಯ ಎರಡು ತಿಂಗಳಲ್ಲಿ ಜನತೆಗೆ ಲಾಲಿಪಪ್ ನ್ನು ನೀಡುತ್ತಾರೆ. ಆದರೆ ಪ್ರಶ್ನೆ ಇರುವುದು ಎಲ್ಲಿಂದ ಸರ್ಕಾರ ನೀಡುತ್ತದೆ? ಜನರಿಗೆ ಸುಳ್ಳು ಭರವಸೆ ನೀಡಿ ಸರ್ಕಾರ ರಚಿಸುವುದೇ ಉದ್ದೇಶವೇ? ಎಂದು ಅವರು ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ. 

ಇದೇ ವೇಳೆ ರಾಜ್ಯದ ಜನತೆಗೂ ಕರೆ ನೀಡಿರುವ ಸಿಧು ಇಂತಹ ಭರವಸೆಗಳನ್ನು ನೋಡಿ ಮತ ಚಲಾಯಿಸದೇ ರಾಜ್ಯದ ಅಭಿವೃದ್ಧಿಯ ಅಜೆಂಡಾವನ್ನು ಗಮನದಲ್ಲಿಟ್ಟುಕೊಂಡು ಮತಚಲಾವಣೆ ಮಾಡುವಂತೆ ಸಲಹೆ ನೀಡಿದ್ದಾರೆ. 

SCROLL FOR NEXT