ದೇಶ

ಉತ್ತರಾಖಂಡ ತಲುಪಿದ ಪ್ರಧಾನಿ ಮೋದಿ: ಕೇದಾರನಾಥಕ್ಕೆ ಭೇಟಿ, ಹಲವು ಯೋಜನೆಗಳಿಗೆ ಚಾಲನೆ

Manjula VN

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಉತ್ತರಾಖಂಡ ತಲುಪಿದ್ದು, ಪುಣ್ಯಕ್ಷೇತ್ರ ಕೇದಾರನಾಥಕ್ಕೆ ಭೇಟಿ ನೀಡಿ ಶಿವ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆಂದು ತಿಳಿದುಬಂದಿದೆ.

ಉತ್ತರಾಖಂಡ ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿಯವರನ್ನು ಉತ್ತರಾಖಂಡದ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಹಾಗೂ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯವರು ಸ್ವಾಗತಿಸಿದರು.

ಇದೀಗ ಪ್ರಧಾನಿ ಮೋದಿಯವರು ಪುಣ್ಯಕ್ಷೇತ್ರ ಕೇದಾರನಾಥಕ್ಕೆ ಭೇಟಿ ನೀಡಿದ್ದು, ಶಿವಮಂದಿರಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಶಿವನಿಗೆ ಪ್ರಾಥನೆ ಸಲ್ಲಿಸಿದ ಬಳಿಕ ಮೋದಿಯವರು ದೇಗುಲದ ಹಿಂದೆ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಆದಿ ಗುರು ಶಂಕರಾಚಾರ್ಯ ಅವರ ಪುತ್ಥಳಿ ಅನಾವರಣಗೊಳಿಸಲಿದ್ದಾರೆ.

2013ರ ಜಲಪ್ರಳಯದಲ್ಲಿ ಹಾನಿಗೀಡಾದ ಶಂಕರಾಚಾರ್ಯ ಸಮಾಧಿಯನ್ನು ಇದೀಗ ಪುನರ್ ನಿರ್ಮಾಣ ಮಾಡಲಾಗಿದ್ದು, ಅದನ್ನೂ ಉದ್ಘಾಟಿಸಲಿದ್ದಾರೆ.

ಜೊತೆಗೆ ರೂ.400 ಕೋಟಿ ಮೌಲ್ಯದ ಕೇದಾರಪುರಿ ಮರು ನಿರ್ಮಾಮ ಯೋಜನಗಳು ಸೇರಿ ಇನ್ನಿತರ ಅಭಿವೃದ್ಧಿ ಯೋಜನೆಗಳಿಗೆ ಅವರು ಚಾಲನೆ ನೀಡಲಿದ್ದಾರೆ. ಪುತ್ಥಳಿ ಅನಾವರಣದ ಕಾರ್ಯಕ್ರಮ 12 ಜ್ಯೋತಿರ್ಲಿಂಗಗಳು, 4 ಶಂಕರಾಚಾರ್ಯರ ಮಠಗಳು, ದೇಶದ ಇತರ ದೇವಾಲಯಗಳಲ್ಲಿ ನೇರ ಪ್ರಸಾರವಾಗಲಿದೆ.

ಮೋದಿಯವರ ಭೇಟಿ ಕುರಿತು ಪ್ರತಿಕ್ರಿಯೆ ನೀಡಿರುವ ಕೇದಾರನಾಥ ದೇವಾಲಯದ ಅರ್ಚಕ ಬಾಗೀಶ್ ಲಿಂಗ್ ಅವರು, "ಪ್ರಧಾನಿ ಮೋದಿಯವರನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ. ಮೋದಿಯವರು ಬೆಳಿಗ್ಗೆ ಇಲ್ಲಿಗೆ ತಲುಪಲಿದ್ದು, ಈ ವೇಳೆ ಮಹಾ ರುದ್ರ ಅಭಿಷೇಕವನ್ನು ಮಾಡುತ್ತಾರೆ ಮತ್ತು ರಾಷ್ಟ್ರದ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಾರೆ. ಇದೇ ವೇಳೆಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ, ದೇವಾಲಯವನ್ನು ಹೂವಿನಿಂದ ಅಲಂಕರಿಸಲಾಗಿದೆ ಎಂದು ಹೇಳಿದ್ದಾರೆ.

ಆದಿ ಶಂಕರಾಚಾರ್ಯರ ಪ್ರತಿಮೆ ಲೋಕಾರ್ಪಣೆ
ಪ್ರಧಾನಿ ಮೋದಿಯವರು ಇಂದು ಬೆಳಗ್ಗೆ 8 ಗಂಟೆಗೆ ಕೇದಾರನಾಥಕ್ಕೆ ಭೇಟಿ ನೀಡಲಿದ್ದು, 8.35ರ ವೇಳೆಗೆ ದೇವರ ದರ್ಶನ ಪಡೆಯಲಿದ್ದಾರೆ. ಬಳಿಕ 9.40ರ ಸುಮಾರಿಗೆ ಶಂಕರಾಚಾರ್ಯರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಪ್ರಧಾನಿ ಕಾರ್ಯಾಲಯದ ಸೂಚನೆಯ ಮೇರೆಗೆ ಮೈಸೂರಿನ ಖ್ಯಾತ ಶಿಲ್ಪಿ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

ಕೇದಾರನಾಥದಲ್ಲಿಯೇ ಶಂಕರಾಚಾರ್ಯರು ದೇಹತ್ಯಾಗ ಮಾಡಿದರು ಎಂಬ ನಂಬಿಕೆ ಇದೆ. ಹೀಗಾಗಿ ಪ್ರಧಾನಿ ಮೋದಿ ಶಂಕರಾಚಾರ್ಯರ ಸಮಾಧಿ ಸ್ಥಳವನ್ನು ಭಕ್ತರ ದರ್ಶನಕ್ಕೆ ಅನಾವರಣಗೊಳಿಸಲಿದ್ದಾರೆ. ಈ ವೇಳೆ ಕೇಂದ್ರ ಸಚಿವರು, ಸಂಸದರು ಮತ್ತು ಬಿಜೆಪಿಯ ಹಿರಿಯ ನಾಯಕರು ದೇಶದ 100ಕ್ಕೂ ಹೆಚ್ಚು ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ.

SCROLL FOR NEXT