ದೇಶ

ವರುಣಾರ್ಭಟ: ಚೆನ್ನೈ ಸೇರಿ 4 ಜಿಲ್ಲೆಗಳ ಶಾಲೆಗಳಿಗೆ 2 ದಿನ ರಜೆ ಘೋಷಿಸಿದ ಸಿಎಂ, ಜನರ ಸ್ಥಳಾಂತರಕ್ಕೆ ಸೂಚನೆ

Vishwanath S

ಚೆನ್ನೈ: ತಮಿಳುನಾಡು ಮತ್ತು ಅದರ ಉಪನಗರ ಪ್ರದೇಶಗಳಲ್ಲಿ ಭಾನುವಾರವೂ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಮತ್ತು ಇತರ ಮೂರು ಜಿಲ್ಲೆಗಳ ಶಾಲೆಗಳಿಗೆ ಮುಖ್ಯಮಂತ್ರಿ ಸ್ಟಾಲಿನ್ ಎರಡು ದಿನ ರಜೆ ಘೋಷಿಸಿದ್ದಾರೆ.

ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ ಮತ್ತು ತಿರುವಳ್ಳುವರ್ ಶಾಲೆಗಳಿಗೆ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ. ಇನ್ನು ಸಿಎಂ ಎಂ.ಕೆ ಸ್ಟಾಲಿನ್ ಅವರು ಮುಖ್ಯ ಕಾರ್ಯದರ್ಶಿ ವಿ ಇರೈ ಅನ್ಬು ಸೇರಿದಂತೆ ಉನ್ನತ ಅಧಿಕಾರಿಗಳೊಂದಿಗೆ ಜಲಾವೃತಗೊಂಡಿರುವ ಹಲವಾರು ಪ್ರದೇಶಗಳನ್ನು ಪರಿಶೀಲಿಸಿದರು. ಇದೇ ವೇಳೆ ಪ್ರವಾಹದ ನೀರನ್ನು ಹರಿಸುವುದಕ್ಕೆ ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸ್ಟಾಲಿನ್ ಅವರು ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ಪೀಡಿತ ಪ್ರದೇಶಗಳಲ್ಲಿನ ಜನರಿಗೆ ಅಕ್ಕಿ, ಹಾಲು ಮತ್ತು ಹೊದಿಕೆ ಸೇರಿದಂತೆ ಪ್ರವಾಹದ ನೆರವನ್ನು ವಿತರಿಸಿದರು. 

ಮಳೆ ಹಿನ್ನೆಲೆ ಅಧಿಕಾರಿಗಳು ಎರಡು ನಗರ ಜಲಾಶಯಗಳನ್ನು ತೆರೆಯಲು ಸಿದ್ಧತೆ ನಡೆಸಿದ್ದು, ಜನರಿಗೆ  ಪ್ರವಾಹ ಎಚ್ಚರಿಕೆಯನ್ನು ನೀಡಿದ್ದಾರೆ. ಚೆನ್ನೈ ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿರುವ ಚೆಂಬರಂಬಾಕ್ಕಂ ಮತ್ತು ಪುಝಲ್ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲು ಗೇಟ್​​ಗಳನ್ನು ತೆರೆಯಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯ ಜಲಸಂಪನ್ಮೂಲ ಅಧಿಕಾರಿಗಳು ಪ್ರವಾಹದ ಎಚ್ಚರಿಕೆಯನ್ನು ನೀಡಿದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲು ಮತ್ತು ಸುರಕ್ಷಿತ ಸ್ಥಳಗಳಲ್ಲಿ ಇರಿಸಲು ಕಾಂಚೀಪುರಂ ಮತ್ತು ತಿರುವಳ್ಳೂರ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

SCROLL FOR NEXT