ದೇಶ

ಲಖೀಂಪುರ ಪ್ರಕರಣ: 'ನಿರೀಕ್ಷಿತ ಮಟ್ಟದ ತನಿಖೆಯಾಗಿಲ್ಲ'; ಉತ್ತರ ಪ್ರದೇಶ ವಿರುದ್ಧ ಸುಪ್ರೀಂ ತರಾಟೆ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗೆ ವಿಚಾರಣೆ ಹೊಣೆ

Srinivasamurthy VN

ನವದೆಹಲಿ: ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸ್ ಮತ್ತು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ನಿರೀಕ್ಷಿತ ಮಟ್ಟದ ತನಿಖೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಗೆ ವಿಚಾರಣೆ ಹೊಣೆ ನೀಡಿದೆ.

ಇಂದು ಲಖಿಂಪುರ ಖೇರಿ ಹಿಂಸಾಚಾರದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರ ಸಲ್ಲಿಸದ ವರದಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ನಾವು ಈಗಾಗಲೇ 10 ದಿನ ಸಮಯಾವಕಾಶ ನೀಡಿದ್ದೇವೆ. ಆದರೂ ಇನ್ನೂ ಕೆಲವರನ್ನು ವಿಚಾರಣೆ ನಡೆಸಬೇಕಿದೆ ಎಂದು ಹೇಳುತ್ತಿರುವುದು ಸರಿಯಲ್ಲ. ಇನ್ನೂ ಲ್ಯಾಬ್ ರಿಪೋರ್ಟ್ ಕೂಡ ಸಿದ್ಧವಾಗಿಲ್ಲ. ನಾವು ಏನು ನಿರೀಕ್ಷಿಸಿದ್ದೆವೋ ಅದರಂತೆ ಉತ್ತರ ಪ್ರದೇಶದ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದೆ.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗೆ ವಿಚಾರಣೆ ಹೊಣೆ
ಲಖಿಂಪುರ ಖೇರಿ ರೈತರ ಹತ್ಯೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ತನಿಖೆಯ ಮೇಲ್ವಿಚಾರಣೆಗೆ ಹೈಕೋರ್ಟ್ ನ್ಯಾಯಾಧೀಶರನ್ನು ನೇಮಿಸಲು ಸುಪ್ರೀಂ ಕೋರ್ಟ್ ಒಲವು ತೋರಿದೆ. ಈ ಪ್ರಕರಣದ ತನಿಖೆಯ ನೇತೃತ್ವವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಹಿಸಿಕೊಳ್ಳಲಿ ಎಂದು ಆದೇಶ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಶುಕ್ರವಾರ ನಡೆಯಲಿದೆ. 

ಈ ಬಗ್ಗೆ ವಿಚಾರಣೆ ವೇಳೆ ತಿಳಿಸಿರುವ ನ್ಯಾಯಮೂರ್ತಿ ಸೂರ್ಯ ಕಾಂತ್, ಎರಡು ಎಫ್‌ಐಆರ್‌ಗಳ (ರೈತರ ಹತ್ಯೆ ಮತ್ತು ರಾಜಕೀಯ ಕಾರ್ಯಕರ್ತರ ಹತ್ಯೆ) ನಡುವಿನ ಅಂತರವನ್ನು ಕಾಯ್ದುಕೊಳ್ಳಲು ಎಸ್‌ಐಟಿಗೆ ಸಾಧ್ಯವಾಗುತ್ತಿಲ್ಲ ಎಂದು ನಮಗೆ ಅನಿಸುತ್ತಿದೆ. ಮುಂದೆ ಬರುವ ಪ್ರತಿಯೊಬ್ಬರ ಹೇಳಿಕೆಗಳನ್ನು ಅವರು ದಾಖಲಿಸಬೇಕು ಎಂದೇನಿಲ್ಲ. ಎರಡು ಎಫ್‌ಐಆರ್‌ಗಳ ಸಾಕ್ಷ್ಯವನ್ನು ಪ್ರತ್ಯೇಕವಾಗಿ ದಾಖಲಿಸಬೇಕು ಎಂದು ಖಚಿತಪಡಿಸಿಕೊಳ್ಳಲು ನಾವು ತನಿಖೆಯನ್ನು ಮೇಲ್ವಿಚಾರಣೆ ಮಾಡಲು ಬೇರೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ್ನು ನೇಮಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಸರ್ಕಾರದ ವ್ಯಾಪ್ತಿಯ ನ್ಯಾಯಮೂರ್ತಿಗಳು ನಮಗೆ ಬೇಡ
ನಿಮ್ಮ ರಾಜ್ಯ ಸರ್ಕಾರದ ವ್ಯಾಪ್ತಿಯ ನ್ಯಾಯಮೂರ್ತಿಗಳು ನಮಗೆ ಬೇಡ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿ ರಂಜೀತ್ ಸಿಂಗ್ ಅಥವಾ ನ್ಯಾಯಮೂರ್ತಿ ರಾಕೇಶ್ ಕುಮಾರ್ ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆಯ ನೇತೃತ್ವ ವಹಿಸಿಕೊಳ್ಳುವ ಬಗ್ಗೆ ಯೋಚಿಸೋಣ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಸೂಚಿಸಿದೆ.

ಏನಿದು ಪ್ರಕರಣ?
ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ವೇಳೆ ನಾಲ್ವರು ರೈತರು ಮತ್ತು ಪತ್ರಕರ್ತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರಿಗೆ ಸೇರಿದ ಎಸ್‌ಯುವಿ ವಾಹನ ರೈತರ ಮೇಲೆ ಹರಿದಿತ್ತು. ಈ ಹಿನ್ನೆಲೆಯಲ್ಲಿ ಅವರ ಮಗ ಆಶಿಶ್ ಮಿಶ್ರಾ ಸೇರಿದಂತೆ 13 ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ.
 

SCROLL FOR NEXT