ದೇಶ

ಭೋಪಾಲ್ ಆಸ್ಪತ್ರೆ ಅಗ್ನಿ ಅವಘಡ: ಪೋಷಕರು ಹೆಸರಿಡುವ ಮುನ್ನವೇ ನಾಲ್ಕು ಕಂದಮ್ಮಗಳು ಸಜೀವ ದಹನ

Lingaraj Badiger

ಭೋಪಾಲ್: ಮಧ್ಯ ಪ್ರದೇಶದ ಸರ್ಕಾರಿ ಸ್ವಾಮ್ಯದ ಕಮಲಾ ನೆಹರು ಮಕ್ಕಳ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇನ್ನೂ ಪ್ರಪಂಚವನ್ನೇ ನೋಡದ ನಾಲ್ಕು ಕಂದಮ್ಮಗಳು ಸಜೀವ ದಹನವಾಗಿವೆ.

ಈ ನವಜಾತ ಶಿಶುಗಳು ಕೇವಲ ಒಂದರಿಂದ ಒಂಬತ್ತು ದಿನಗಳದಾಗಿದ್ದು, ಅವರ ಪೋಷಕರು ಇನ್ನೂ ನಾಮಕರಣ ಸಹ ಮಾಡಿರಲಿಲ್ಲ. ಏಕೆಂದರೆ ಆ ಮಕ್ಕಳನ್ನು ಚಿಕಿತ್ಸೆಗಾಗಿ ಸರ್ಕಾರಿ ಕಮಲಾ ನೆಹರು ಆಸ್ಪತ್ರೆಯ ನವಜಾತ ಶಿಶುಗಳ ವಿಶೇಷ ನಿಗಾ ಘಟಕ(ಎಸ್‌ಎನ್‌ಸಿಯು)ಕ್ಕೆ ದಾಖಲಿಸಲಾಗಿತ್ತು.

ಮಕ್ಕಳ ಜನನದಿಂದ ಸಂತೋಷಗೊಂಡ ಅವರ ಪೋಷಕರು ಬಹುಶಃ ಅವರಿಗೆ ಯಾವ ಹೆಸರಿಡಬೇಕು ಎಂಬುದರ ಬಗ್ಗೆ ಯೋಚಿಸುತ್ತಿದ್ದರು, ಆದರೆ ಅದು ಸಾಧ್ಯವಾಗಲಿಲ್ಲ.

ಈಗ ಅವರನ್ನು ಈ ಜಗತ್ತು "ಇರ್ಫಾನಾ ಮಗು, ಶಿವಾನಿಯ ಮಗು, ಶಾಜ್ಮಾ ಮತ್ತು ರಚನಾ ಮಗು" ಎಂದು ಮಾತ್ರ ನೆನಪಿಸಿಕೊಳ್ಳುತ್ತದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಮಲಾ ನೆಹರು ಮಕ್ಕಳ ಆಸ್ಪತ್ರೆಯ ವಿಶೇಷ ನವಜಾತ ಶಿಶು ನಿಗಾ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಈ ಅನಾಹುತ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ಕಾರಣ ವಾರ್ಡ್‍ನೊಳಗೆ ಕತ್ತಲೆ ಆವರಿಸಿತ್ತು. ತಕ್ಷಣವೇ ಮಕ್ಕಳನ್ನು ಪಕ್ಕದ ವಾರ್ಡ್‍ಗೆ ಸ್ಥಳಾಂತರಿಸಲಾಯಿತು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಅವರು ಹೇಳಿದ್ದಾರೆ.

ಐಸಿಯು ಹೊಂದಿರುವ ಆಸ್ಪತ್ರೆಯ ಮೂರನೇ ಮಹಡಿಯಲ್ಲಿರುವ ವಾರ್ಡ್‍ನಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, 8-10 ಅಗ್ನಿಶಾಮಕ ಇಂಜಿನಿಯರ್‍ ಗಳು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಫತೇಘರ್ ಅಗ್ನಿಶಾಮಕ ಠಾಣೆಯ ಉಸ್ತುವಾರಿ ಜುಬರ್ ಖಾನ್ ಅವರು ತಿಳಿಸಿದ್ದಾರೆ.

SCROLL FOR NEXT