ದೇಶ

ಬಿಟ್ ಕಾಯಿನ್ ಬಗ್ಗೆ ಚರ್ಚೆ ಆಗಿಲ್ಲ, ದಿಟ್ಟತನದಿಂದ ನಿಮ್ಮ ಕೆಲಸ ಮುಂದುವರಿಸುವಂತೆ ಪ್ರಧಾನಿ ಸೂಚನೆ: ಸಿಎಂ ಬೊಮ್ಮಾಯಿ

Sumana Upadhyaya

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಹಲವು ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದು, ಮಾತುಕತೆ ಅತ್ಯಂತ ಸೌಹಾರ್ದಯುತವಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಹೊರಬಂದ ಬಳಿಕ ಮಾಧ್ಯಮಗಳಿಗೆ ವಿವರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಳೆದ 100 ದಿನಗಳಲ್ಲಿ ತಮ್ಮ ನೇತೃತ್ವದ ಸರ್ಕಾರ ನಡೆಸಿರುವ ಆಡಳಿತ, ಸುಧಾರಣಾ ಕ್ರಮಗಳು, ಕೈಗೊಂಡಿರುವ ಯೋಜನೆಗಳ ಬಗ್ಗೆ ಪ್ರಧಾನಿಯವರು ಸಂತೃಪ್ತಿ, ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯದ ಜನತೆಯ ವಿಶ್ವಾಸ ಪಡೆಯಲು ಮತ್ತು ಜನರ ಹಿತದೃಷ್ಟಿಯಿಂದ ಇನ್ನಷ್ಟು ಉತ್ತಮ ಕೆಲಸ ಮಾಡಿ ಎಂದು ಪ್ರಧಾನ ಮಂತ್ರಿಗಳು ಪ್ರೋತ್ಸಾಹದ ಮಾತುಗಳನ್ನು ನುಡಿದಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಡಿಸೆಂಬರ್ ನಲ್ಲಿ ಬೆಂಗಳೂರಿಗೆ ಪ್ರಧಾನಿ ಭೇಟಿ: ಡಿಸೆಂಬರ್ ತಿಂಗಳಲ್ಲಿ ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಪ್ರಧಾನ ಮಂತ್ರಿಗಳಿಗೆ ಆಹ್ವಾನ ನೀಡಿದಾಗ ಎರಡು ಕಾರ್ಯಕ್ರಮಗಳಾಗಿ ಮಾಡಿ, ಎರಡು ಬಾರಿ ಬರುತ್ತೇನೆ ಎಂದು ಹೇಳಿದ್ದಾರೆ.ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆ ಉದ್ಘಾಟನೆ, ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಉದ್ಘಾಟನಾ ಕಾರ್ಯಕ್ರಮ, 180ಕ್ಕೂ ಹೆಚ್ಚು ಐಟಿಐ ಅಪ್ ಗ್ರೆಡೇಶನ್, ಬೆಂಗಳೂರಿನ ಅಭಿವೃದ್ಧಿ ಕಾರ್ಯಕ್ರಮಗಳು ಸೇರಿವೆ ಎಂದರು.  

ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ಬಗ್ಗೆ ಕೂಡ ಪ್ರಧಾನಿ ಜೊತೆ ಚರ್ಚೆ ನಡೆಸಿದ್ದೇನೆ, ಹಾನಗಲ್ ನಲ್ಲಿ ಅಲ್ಪ ಪ್ರಮಾಣದಲ್ಲಿ ಸೋತಿದ್ದೇವೆ ಎಂದಾಗ ಚುನಾವಣೆಯಲ್ಲಿ ಸೋಲು-ಗೆಲುವು ಇದ್ದಿದ್ದೇ, ಎದೆಗುಂದಬೇಡಿ ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಕೆಲಸಗಳನ್ನು ಮಾಡಿ ಜನರ ವಿಶ್ವಾಸ ಗಳಿಸಲು ಪ್ರಯತ್ನಿಸಿ ಎಂದರು ಎಂದರು.

ಬಿಟ್ ಕಾಯಿನ್ ಬಗ್ಗೆ ಚರ್ಚೆಯೇ ಆಗಿಲ್ಲ: ಇಂದು ಮಾತುಕತೆ ಮಧ್ಯೆ ಬಿಟ್ ಕಾಯಿನ್ ದಂಧೆ ಪ್ರಸ್ತಾಪಿಸಲು ನಾನಾಗಿಯೇ ಪ್ರಯತ್ನಪಟ್ಟೆ, ಆಗ ಪ್ರಧಾನ ಮಂತ್ರಿಗಳು ಇವುಗಳ ಬಗ್ಗೆಯೆಲ್ಲಾ ತಲೆಕೆಡಿಸಿಕೊಳ್ಳಬೇಡಿ, ನೀವು ನಿಷ್ಠೆ, ದಿಟ್ಟತನದಿಂದ ಕೆಲಸವನ್ನು ಮಾಡಿಕೊಂಡು ಹೋಗಿ, ಎಲ್ಲಾ ಸರಿ ಹೋಗುತ್ತದೆ ಎಂದು ಸಲಹೆ ನೀಡಿದ್ದಾರೆ ಎಂದರು.

ಬಿಟ್ ಕಾಯಿನ್ ಬಗ್ಗೆ ನನಗಿಂತ ಹೆಚ್ಚು ಕೇಂದ್ರದ ನಾಯಕರ ಬಳಿಯೇ ಮಾಹಿತಿಯಿರುತ್ತದೆ. ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಅಡಿಯಲ್ಲಿ ದೆಹಲಿಯಲ್ಲಿಯೇ ಇದೆ ಎಂದು ಸಿಎಂ ಹೇಳಿದರು.

ಇಂದಿನ ಪ್ರಧಾನಿ ಭೇಟಿಯ ವೇಳೆ ಆದ ಮಾತುಕತೆ ಚರ್ಚೆಗಳ ಬಗ್ಗೆ ಮುಖ್ಯಮಂತ್ರಿ ಎಳೆಎಳೆಯಾಗಿ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಕಳೆದ 100 ದಿನಗಳಲ್ಲಿ ನಾನು ಮುಖ್ಯಮಂತ್ರಿಯಾದ ನಂತರ ರಾಜ್ಯಕ್ಕೆ ನೀಡಿರುವ ಆಡಳಿತ ಬಗ್ಗೆ ಪ್ರಧಾನ ಮಂತ್ರಿಗಳು ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಟಾರ್ಗೆಟ್ 2023ಯನ್ನು ಇಟ್ಟುಕೊಂಡು ಕೆಲಸ ಮುಂದುವರಿಸಿ ಎಂದಿದ್ದಾರೆ. 

ರೈತರ ಮಕ್ಕಳಿಗೆ ವಿದ್ಯಾಸಿರಿ ಯೋಜನೆ, ಹೆಣ್ಣುಮಕ್ಕಳಿಗೆ ವಿಶೇಷ ಯೋಜನೆ, ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮಗಳ ಬಗ್ಗೆ, ಟೆಂಡರ್ ಆಹ್ವಾನದ ಬಗ್ಗೆ ಮೆಚ್ಚುಗೆ ಸೂಚಿಸಿ ಅದು ಬೇರೆ ರಾಜ್ಯಕ್ಕೆ ಮಾದರಿಯಾಗಿ ತೆಗೆದುಕೊಳ್ಳಬಹುದೆಂದಿದ್ದಾರೆ. ರಾಜ್ಯದಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಕೂಡ ಪ್ರಧಾನಿ ಜೊತೆ ಚರ್ಚೆಯಾಗಿದೆ ಎಂದರು. 

ಜೆ ಪಿ ನಡ್ಡಾ ಅವರ ಜೊತೆಗೆ ಮುಂಬರುವ ಚುನಾವಣೆಗಳ ಬಗ್ಗೆ ಮತ್ತು ಪಕ್ಷದಲ್ಲಿ ಕೋರ್ ಕಮಿಟಿ ಮೀಟಿಂಗ್ ಬಗ್ಗೆ, ಜನ ಸ್ವರಾಜ್ ಯಾತ್ರೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಮುಂದಿನ ವರ್ಷದ ಉತ್ತರ ಪ್ರದೇಶ ಚುನಾವಣೆಯಲ್ಲಿ ಬ್ಯುಸಿಯಿದ್ದರೂ ಕರ್ನಾಟಕ ಕೂಡ ನಮ್ಮ ಆದ್ಯತೆ ರಾಜ್ಯ, ಅಲ್ಲಿಗೆ ಕೂಡ ಗಮನ ನೀಡುತ್ತೇವೆ, ಸಮಯ ನೀಡಿ ವಿಧಾನ ಪರಿಷತ್ ಚುನಾವಣೆಗೆ ಸಮಯ ನೀಡಿ ಕರ್ನಾಟಕಕ್ಕೆ ಬರುತ್ತೇನೆ ಎಂದಿದ್ದಾರೆ ಎಂದರು.

SCROLL FOR NEXT