ದೇಶ

ತಿರುಮಲದಲ್ಲಿ ಭಾರಿ ಮಳೆ: ಪ್ರವಾಹದಿಂದ ಯಾತ್ರಿಕರು ತತ್ತರ; ಅಲ್ಲಲ್ಲಿ ಭೂಕುಸಿತ, ಘಾಟ್ ರಸ್ತೆಗಳು ತಾತ್ಕಾಲಿಕ ಬಂದ್!

Srinivasamurthy VN

ತಿರುಪತಿ: ಖ್ಯಾತ ಧಾರ್ಮಿಕ ಯಾತ್ರಾತಾಣ ತಿರುಪತಿ-ತಿರುಮಲದಲ್ಲಿ ಸುರಿಯುತ್ತಿರುವ ವರ್ಷಧಾರೆ ಭಾರಿ ಅವಾಂತರ ಸೃಷ್ಟಿ ಮಾಡಿದ್ದು, ತಿರುಮಲದಲ್ಲಿ ಪ್ರವಾಹ ನೀರಿನಿಂದ ಯಾತ್ರಿಕರು ತತ್ತರಿಸಿ ಹೋಗಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಭಾರತದ ರಾಜ್ಯಗಳು ಅಂದರೆ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ ಆಂಧ್ರ ಪ್ರದೇಶದಲ್ಲೂ ಪ್ರಮುಖವಾಗಿ ಆಂಧ್ರ ಪ್ರದೇಶ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದೆ. ತಿರುಮಲದ ಪ್ರಮುಖ ಯಾತ್ರಾ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಬೆಟ್ಟಗುಡ್ಡಗಳಲ್ಲಿ ಸಣ್ಣ ಜಲಪಾತಗಳು ಸೃಷ್ಟಿಯಾಗಿವೆ. ಅಲ್ಲದೆ ಭಾರಿ ಮಳೆಯಿಂದಾಗಿ ತಿರುಮಲದಲ್ಲಿ ಜನಜೀವನ ಅಸ್ಥವ್ಯಸ್ಥವಾಗಿದ್ದು, ಹಲವು ಮರಗಳು ಬುಡಮೇಲಾಗಿ ಅಲ್ಲಲ್ಲಿ ಭೂಕುಸಿತ ಕೂಡ ಉಂಟಾಗಿವೆ. 

ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕೆಲವೇ ಗಂಟೆಗಳ ಅವಧಿಯಲ್ಲಿ ತಿರುಮಲದಲ್ಲಿ ಬರೊಬ್ಬರಿ 10 ಸೆಂಮೀ ಮಳೆಯಾಗಿದೆ. ಮಳೆಯಿಂದಾಗಿ ತಿರುಮಲದಲ್ಲಿ ಮೂರು ಬೃಹತ್ ಮರಗಳು ನೆಲಕ್ಕುರುಳಿವೆ. ತಿರುಮಲದ ಪ್ರಮುಖ ಯಾತ್ರಾ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಅಲ್ಲಲ್ಲಿ ಭೂಕುಸಿತ ಸಂಭವಿಸಿದೆ. ಹೀಗಾಗಿ ತಾತ್ಕಾಲಿಕವಾಗಿ ಘಾಟ್ ರಸ್ತೆಗಳನ್ನು ಬಂದ್ ಮಾಡಲಾಗಿದೆ. 

ಅಲಿಪಿರಿಯಲ್ಲಿ ಪ್ರವಾಹ, ಭೀತಿಯಲ್ಲಿ ಯಾತ್ರಿಕರು
ಇನ್ನು ತಿರುಪತಿಯಿಂದ ತಿರುಮಲಕ್ಕೆ ಸಾಗುವ ಅಲಿಪಿರಿ ಮಾರ್ಗದಲ್ಲಿ ಪ್ರವಾಹದ ನೀರು ನುಗ್ಗಿದ್ದು, ಕಾಲ್ದಾರಿ ಸಾಗುವ ಕಾಂಪ್ಲೆಕ್ಸ್ ಒಳಗೆ ಭಾರಿ ಪ್ರಮಾಣದ ನೀರು ಹರಿಯುತ್ತಿದೆ. ಈ ಕುರಿತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ನೀರಿನ ನಡುವೆಯೇ ಯಾತ್ರಿಕರು ಮೆಟ್ಟಿಲುಗಳನ್ನು ಹತ್ತಿ ದೇಗುಲಕ್ಕೆ ತೆರಳುವ ದೃಶ್ಯಗಳು ಇದೀಗ ವೈರಲ್ ಆಗುತ್ತಿವೆ.
 

SCROLL FOR NEXT