ದೇಶ

ದಕ್ಷಿಣ ವಲಯ ಪರಿಷತ್ತಿನ 29ನೇ ಸಭೆ: ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಸಮರ್ಥ ಕೇಂದ್ರ ಮತ್ತು ರಾಜ್ಯಗಳು ಅಗತ್ಯ-ಸಿಎಂ ಬೊಮ್ಮಾಯಿ

Nagaraja AB

ತಿರುಪತಿ: ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಸಮರ್ಥ ಕೇಂದ್ರ ಹಾಗೂ ರಾಜ್ಯಗಳ ಅಗತ್ಯವಿದೆ. ನಾವು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಿದರೆ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಆಂಧ್ರ ಪ್ರದೇಶದ ತಿರುಪತಿಯಲ್ಲಿ ಇಂದು ನಡೆದ ದಕ್ಷಿಣ ವಲಯ ಪರಿಷತ್ತಿನ 29ನೇ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಕ್ಷಿಣ ಭಾರತದ ರಾಜ್ಯಗಳೆಲ್ಲವೂ ಪ್ರಾಕೃತಿಕವಾಗಿ ಸಂರ್ಪಕಿತವಾಗಿರುವುದರಿಂದ ನಾವೆಲ್ಲರೂ ಒಟ್ಟಾಗಿ  ಕೆಲಸ ಮಾಡುವುದು ಅನಿವಾರ್ಯ. ರಾಷ್ಟ್ರದ ಒಳಿತಿಗಾಗಿ ಒಮ್ಮತದಿಂದ ಕೆಲಸ ಮಾಡಿದಾಗ ದೇಶದ ಅಭಿವೃದ್ಧಿ ಸಾಧ್ಯವೆಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ದಕ್ಷಿಣ ವಲಯ ಪರಿಷತ್ ಸಭೆಗಳು ನೀರು ಹಂಚಿಕೆ, ಸಾರಿಗೆ ಸಂಪರ್ಕ, ಆರೋಗ್ಯ ಮತ್ತು ವ್ಯವಹಾರಗಳನ್ನು ಒಮ್ಮತದಿಂದ ಬಗೆಹರಿಸಿಕೊಳ್ಳುವ ಉತ್ತಮ ವೇದಿಕೆಯಾಗಿದೆ. ದಕ್ಷಿಣದ ರಾಜ್ಯಗಳು ಎಲ್ಲ ವಲಯಗಳಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಗೋದಾವರಿ, ಕಾವೇರಿ ಮತ್ತು ಇತರೆ ನದಿಗಳ ಜೋಡಣೆ ಯೋಜನೆ ಬಗ್ಗೆ ರಾಜ್ಯ ತನ್ನ ಅಭಿಪ್ರಾಯವನ್ನು  ಈಗಾಗಲೇ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಗೆ ತಿಳಿಸಿದೆ. ಕಾವೇರಿ, ಕೃಷ್ಣಾ ಮತ್ತು ಪೆನ್ನಾರ್ ಜಲಾನಯನ ಪ್ರದೇಶದಲ್ಲಿ ರಾಜ್ಯಕ್ಕೆ ತನ್ನ ಪಾಲಿನ ನೀರು ಹಂಚಿಕೆಯಾಗಬೇಕೆಂಬ ವಾದವನ್ನು ಸಿಎಂ ಸ್ಪಷ್ಟಪಡಿಸಿದರು.

 ಸಹ ಜಲಾನಯನ ಪ್ರದೇಶಗಳನ್ನು ಹೊಂದಿರುವ ರಾಜ್ಯಗಳ ಪಾಲನ್ನು ನಿರ್ಧರಿಸಲಾಗಿಲ್ಲದಿದ್ದರೂ ತಮಿಳುನಾಡು ಕಾವೇರಿ-ವಗೈ- ಗುಂಡಾರ್ ಸಂಪರ್ಕ ಕಾಮಗಾರಿಯನ್ನು ಮುಂದುವರೆಸಿದೆ, ಇದಕ್ಕೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ, ಆದ್ದರಿಂದ ಕಾವೇರಿ-ವಗೈ- ಗುಂಡಾರ್ ಜೋಡಣೆ ಪ್ರಸ್ತಾವನೆಯನ್ನು ಅನುಮೋದಿಸಬಾರದು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
 

SCROLL FOR NEXT