ದೇಶ

ನಾಳೆ ಕಾಂಗ್ರೆಸ್ ನಿಂದ 'ಕಿಸಾನ್ ವಿಜಯ್ ದಿವಸ್' ಆಚರಣೆ

Nagaraja AB

ನವದೆಹಲಿ: ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುವುದಾಗಿ ಶುಕ್ರವಾರ ಘೋಷಿಸಿದ ಹಿನ್ನೆಲೆಯಲ್ಲಿ ನಾಳೆ (ಶನಿವಾರ) 'ಕಿಸಾನ್ ವಿಜಯ್ ದಿವಸ್' ಆಚರಿಸಲು ಕಾಂಗ್ರೆಸ್ ನಿರ್ಧರಿಸಿದೆ. ಅಲ್ಲದೇ ದೇಶಾದ್ಯಂತ ಗೆಲುವಿನ ರ‍್ಯಾಲಿಗಳನ್ನು ಆಯೋಜಿಸಲಿದೆ. 

ಹೋರಾಟದ ಸಂದರ್ಭದಲ್ಲಿ ಮೃತಪಟ್ಟ ಸುಮಾರು 700 ರೈತರ ಕುಟುಂಬಗಳನ್ನು ಕಾಂಗ್ರೆಸ್ ಮುಖಂಡರು ಭೇಟಿಯಾಗಲಿದ್ದಾರೆ. ಅಲ್ಲದೇ, ಮೊಂಬತ್ತಿ ಮೆರವಣಿಗೆ ನಡೆಸಿ, ಮೃತಪಟ್ಟ ರೈತರ ಆತ್ಮಕ್ಕೆ ಶಾಂತಿ ಕೋರಲಿದ್ದಾರೆ. ಇಂತಹ ರ‍್ಯಾಲಿಗಳು ಮತ್ತು ಮೊಂಬತ್ತಿ ಮೆರವಣಿಗೆಗಳನ್ನು ರಾಜ್ಯಗಳು, ಜಿಲ್ಲೆಗಳು ಮತತು ಬ್ಲಾಕ್ ಮಟ್ಟದಲ್ಲಿ ಆಯೋಜಿಸುವಂತೆ ಎಐಎಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಎಲ್ಲಾ ರಾಜ್ಯ ಘಟಕಗಳಿಗೆ ಸೂಚಿಸಿದ್ದಾರೆ. 

ಈ ಸಂಬಂಧ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಪತ್ರ ಬರೆದಿರುವ ವೇಣುಗೋಪಾಲ್, ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಾಪಸ್ ಪಡೆದಿರುವುದು ರೈತರು ಹಾಗೂ ರೈತರ ಹೋರಾಟ, ರಾಹುಲ್ ಗಾಂಧಿ ನೇತೃತ್ವದ ಪ್ರತಿಪಕ್ಷಗಳ ಸುಧೀರ್ಘ ಹೋರಾಟಕ್ಕೆ ಸಂದ ಜಯ ಎಂದಿದ್ದಾರೆ. 

ದಬ್ಬಾಳಿಕೆ ಸರ್ಕಾರದ ದೋಷಪೂರಿತ ನಿರ್ಧಾರಗಳ ವಿರುದ್ಧ ರೈತರ ಉತ್ಸಾಹ ಭರಿತ ಹೋರಾಟ ಹಾಗೂ ಬದ್ಧತೆಯನ್ನು ಗುರುತಿಸುವ ನಿಟ್ಟಿನಲ್ಲಿ ನಾಳೆ ಕಾಂಗ್ರೆಸ್ , ಕಿಸಾನ್ ವಿಜಯ್ ದಿವಸ್ ಆಚರಿಸುತ್ತಿದೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ. 

SCROLL FOR NEXT