ದೇಶ

ಏಷ್ಯಾದ ಮೊದಲ ಮಹಿಳಾ ಟ್ರಕ್​ ಡ್ರೈವರ್​ ಪಾರ್ವತಿ ಆರ್ಯ ನಿಧನ

Lingaraj Badiger

ಮಂದಸೌರ್: ಏಷ್ಯಾದ ಮೊದಲ ಮಹಿಳಾ ಟ್ರಕ್ ಡ್ರೈವರ್ ಮತ್ತು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತೆ ಪಾರ್ವತಿ ಆರ್ಯ ಅವರು 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಕಾಂಗ್ರೆಸ್ ನಾಯಕಿ ಪಾರ್ವತಿ ಆರ್ಯ ಅವರು, ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರ ಆರೋಗ್ಯ ಹಠಾತ್ ಹದಗೆಟ್ಟಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಪಾರ್ವತಿ ಆರ್ಯ ಅವರ ತಂದೆ ಮಂದಸೌರ್‌ನಲ್ಲಿ ಗುತ್ತಿಗೆದಾರರಾಗಿದ್ದರು. ತಂದೆ ಮರಣದ ನಂತರ ಚಿಕ್ಕ ವಯಸ್ಸಿನಲ್ಲೇ 8 ಸಹೋದರಿಯರು ಮತ್ತು ಮೂವರ ಸಹೋದರರ ಜವಾಬ್ದಾರಿ ಅವರ ಮೇಲೆ ಬಿದ್ದಿತ್ತು. ಕುಟುಂಬದಲ್ಲಿ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ಇತ್ತು. ತನ್ನ ಒಡಹುಟ್ಟಿದವರನ್ನು ನೋಡಿಕೊಳ್ಳಲು ಅವರು ಟ್ರಕ್ ಓಡಿಸಲು ಕಲಿತರು.

ಆ ಸಮಯದಲ್ಲಿ, ಮಹಿಳಾ ಪರವಾನಗಿಗಾಗಿ ಆರ್‌ಟಿಒ ಅಧಿಕಾರಿಗಳಿಗೆ ಮನವರಿಕೆ ಮಾಡುವುದು ಡ್ರೈವಿಂಗ್ ಕಲಿಯುವುದಕ್ಕಿಂತ ಹೆಚ್ಚು ಕಷ್ಟಕರವಾಗಿತ್ತು. ಇಂದಿರಾ ಗಾಂಧಿಯವರು ದೇಶವನ್ನು ನಡೆಸಬಲ್ಲವರಾಗಿದ್ದರೆ ನಾನೇಕೆ ಟ್ರಕ್ ಓಡಿಸಬಾರದು ಎಂದು ಪಾರ್ವತಿ ಅಧಿಕಾರಿಗಳಿಗೆ ಪ್ರಶ್ನಿಸಿದ್ದರು. ಇದರ ನಂತರ ಅವರು ಏಷ್ಯಾದ ಮೊದಲ ಮಹಿಳಾ ಟ್ರಕ್ ಡ್ರೈವರ್ ಆದರು.

ವಿಧಾನಸಭೆ ಚುನಾವಣೆಗೂ ಸ್ಪರ್ಧೆ
ಬಹುಕಾಲದಿಂದ ಅವರು ರಾಜಕೀಯದಲ್ಲಿಯೂ ಸಹ ಇದ್ದಿದ್ದರು. ಕಾಂಗ್ರೆಸ್​ ಪಕ್ಷದಲ್ಲಿದ್ದ ಅವರು ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದರು. 1990 ರಲ್ಲಿ ಅವರು ಕಾಂಗ್ರೆಸ್​ನಿಂದ ಟಿಕೆಟ್‌ ಪಡೆದು ವಿಧಾನಸಭಾ ಚುನಾವಣೆಯಲ್ಲಿ ಸೋತರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿಯೂ ಆಯ್ಕೆಯಾದರು. ಎರಡು ಬಾರಿ ಪಂಚಾಯತ್ ಸದಸ್ಯೆಯೂ ಆಗಿದ್ದರು.

ಏಷ್ಯಾದ ಮೊದಲ ಟ್ರಕ್ ಡ್ರೈವರ್
ಏಷ್ಯಾದ ಮೊದಲ ಮಹಿಳಾ ಟ್ರಕ್ ಚಾಲಕಿ ಎಂದು ಅವರ ಹೆಸರು ದಾಖಲಾಗಿದೆ. ಇದಕ್ಕಾಗಿ ಅಂದಿನ ರಾಷ್ಟ್ರಪತಿ ಗಿಯಾನಿ ಜೈಲ್ ಸಿಂಗ್ ಅವರಿಗೆ ಪ್ರಶಸ್ತಿಯನ್ನೂ ನೀಡಿದ್ದರು.

SCROLL FOR NEXT