ದೇಶ

ಕಡಪದಲ್ಲಿ ಹಠಾತ್ ಪ್ರವಾಹ: ಮೂವರು ಸಾವು, 30 ಮಂದಿ ನಾಪತ್ತೆ

Shilpa D

ಕಡಪ: ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿರುವ ಹಠಾತ್ ಪ್ರವಾಹದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು, 30 ಮಂದಿ ನಾಪತ್ತೆಯಾಗಿದ್ದಾರೆ.

ಅಣೆಕಟ್ಟು ಒಡೆದು ಚೆಯ್ಯೆರು ನದಿ ಉಕ್ಕಿ ಹರಿದ ಪರಿಣಾಮ ಹಲವಾರು ಗ್ರಾಮಗಳು ಜಲಾವೃತಗೊಂಡಿವೆ. ನಂದಲೂರಿನ ಸ್ವಾಮಿ ಆನಂದ ದೇವಸ್ಥಾನವೂ ಮುಳುಗಡೆಯಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಶುಕ್ರವಾರ ಮುಂಜಾನೆ ತಮಿಳುನಾಡು ಮತ್ತು ಆಂಧ್ರಪ್ರದೇಶದ ನಡುವೆ ಕರಾವಳಿಯನ್ನು ದಾಟಿದ್ದರಿಂದ ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಾಗಿದೆ.

ವೆಂಕಟೇಶ್ವರನ ಆವಾಸಸ್ಥಾನವಾದ ತಿರುಮಲದಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ನೂರಾರು ಯಾತ್ರಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ತಿರುಮಲ ಬೆಟ್ಟದ ಮುಖ್ಯ ದೇವಾಲಯಕ್ಕೆ ಹೊಂದಿಕೊಂಡಿರುವ ನಾಲ್ಕು ಬೀದಿಗಳು ಜಲಾವೃತಗೊಂಡಿವೆ.

ಎನ್ ಡಿ ಆರ್ ಎಫ್ ಮತ್ತುಎಸ್ ಡಿಜಿ ಆರ್ ಎಫ್ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕ್ರಮ ಕೈಗೊಂಡಿವೆ. ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ರಕ್ಷಣಾ ಮತ್ತು ಪರಿಹಾರ ಕ್ರಮಗಳನ್ನು ಹೆಚ್ಚಿಸುವಂತೆ ಅವರಿಗೆ ನಿರ್ದೇಶನ ನೀಡಿದರು.

SCROLL FOR NEXT