ದೇಶ

ಕೋವಿಡ್-19: ದೇಶದಲ್ಲಿ 9,283 ಹೊಸ ಪ್ರಕರಣ, ಕಳೆದ 537 ದಿನಗಳಲ್ಲಿ ಅತಿ ಕಡಿಮೆ; 437 ಮಂದಿ ಸಾವು

Sumana Upadhyaya

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 9 ಸಾವಿರದ 283 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 3 ಕೋಟಿಯ 45 ಲಕ್ಷದ  35 ಸಾವಿರದ 763ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ದೇಶದಲ್ಲಿ 1 ಲಕ್ಷದ 11 ಸಾವಿರದ 481ಕ್ಕೆ ಇಳಿಕೆಯಾಗಿದೆ. ಇದು ಕಳೆದ 537 ದಿನಗಳಲ್ಲಿ ಅತಿ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶ ವರದಿ ಮಾಡಿದೆ.

ದೇಶದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 4 ಲಕ್ಷದ 66 ಸಾವಿರದ 584ಕ್ಕೆ ತಲುಪಿದ್ದು 437 ಮಂದಿ ಹೊಸದಾಗಿ ಮೃತಪಟ್ಟಿದ್ದಾರೆ. ಪ್ರತಿದಿನ ಸೋಂಕಿತರ ಸಂಖ್ಯೆ ಸತತ 47 ದಿನಗಳಿಂದ 20 ಸಾವಿರಕ್ಕಿಂತ ಕಡಿಮೆ ಸಂಖ್ಯೆಯಲ್ಲಿದೆ ಹಾಗೂ ಸತತ 150 ದಿನಗಳಿಂದ ಪ್ರತಿದಿನ ಸೋಂಕಿತರ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆ ವರದಿಯಾಗಿದೆ.

ಒಟ್ಟಾರೆ ಸೋಂಕಿತರ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇಕಡಾ 0.32ರಷ್ಟಿದ್ದು, ಕಳೆದ ವರ್ಷ ಮಾರ್ಚ್ ನಿಂದ ಅತಿ ಕಡಿಮೆಯಾಗಿದೆ. ದೇಶದಲ್ಲಿ ಕೋವಿಡ್ ನಿಂದ ಗುಣಮುಖ ಹೊಂದುತ್ತಿರುವವರ ಪ್ರಮಾಣ ಶೇಕಡಾ 98.33ರಷ್ಟಿದ್ದು ಕಳೆದ ವರ್ಷ ಮಾರ್ಚ್ ನಿಂದ ಅತಿ ಗರಿಷ್ಠವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಕಳೆದ ಒಂದು ದಿನದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 2 ಸಾವಿರದ 103ರಷ್ಟು ಕಡಿಮೆಯಾಗಿದೆ. ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಕಳೆದ ವರ್ಷ 2020ರ ಆಗಸ್ಟ್ 7ರಂದು 20 ಲಕ್ಷ ಗಡಿ ದಾಟಿತ್ತು. ಆಗಸ್ಟ್ 23ರಂದು 30 ಲಕ್ಷ, ಸೆಪ್ಟೆಂಬರ್ 5ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16ರಂದು 50 ಲಕ್ಷ ಗಡಿಯನ್ನು ದಾಟಿತ್ತು.

ನಂತರ 2020ರ ಸೆಪ್ಟೆಂಬರ್ 28 ರಂದು 60 ಲಕ್ಷ, ಅಕ್ಟೋಬರ್ 11 ರಂದು 70 ಲಕ್ಷ, ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ಗಡಿ ದಾಟಿತ್ತು. ಭಾರತವು ಕಳೆದ ಮೇ 4 ರಂದು ಎರಡು ಕೋಟಿ ಮತ್ತು ಜೂನ್ 23 ರಂದು ಮೂರು ಕೋಟಿಗೆ ಸೋಂಕಿತರ ಸಂಖ್ಯೆ ತಲುಪಿತ್ತು.

SCROLL FOR NEXT