ದೇಶ

ಪ್ರಧಾನಿ ಮೋದಿ ಭೇಟಿ ಮಾಡಿದ ಮಮತಾ, ಬಿಎಸ್ಎಫ್ ಪ್ರಾದೇಶಿಕ ಅಧಿಕಾರ ವ್ಯಾಪ್ತಿ ವಿಸ್ತರಣೆಗೆ ಆಕ್ಷೇಪ

Lingaraj Badiger

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಪಶ್ಚಿಮ ಬಂಗಾಳದ ಅಭಿವೃದ್ಧಿಯ ಜೊತೆಗೆ ಬಾಂಗ್ಲಾ ಗಡಿರೇಖೆಯಲ್ಲಿ ಬಿಎಸ್ಎಫ್ ಪ್ರಾದೇಶಿಕ ಅಧಿಕಾರ ವ್ಯಾಪ್ತಿ ಹೆಚ್ಚಿಸಿರುವ ವಿಚಾರಗಳ ಕುರಿತು ಚರ್ಚಿಸಿದ್ದಾರೆ.

ಪ್ರಧಾನಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ರಾಜ್ಯಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ನಾನು ಇಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದೇನೆ. ಬಿಎಸ್‌ಎಫ್‌ನ ಅಧಿಕಾರ ವ್ಯಾಪ್ತಿ ವಿಸ್ತರಣೆ ವಿಷಯದ ಬಗ್ಗೆಯೂ ಮಾತನಾಡಿದ್ದೇನೆ ಮತ್ತು ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.

ದೇಶದ ಒಕ್ಕೂಟ ರಚನೆಗೆ ಯಾವುದೇ ರೀತಿಯ ಧಕ್ಕೆ ಉಂಟಾಗಬಾರದು ಎಂದು ಮೋದಿ ಅವರಿಗೆ ತಿಳಿಸಿದ್ದೇನೆ ಮತ್ತು ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಜಾಗತಿಕ ವ್ಯಾಪಾರ ಶೃಂಗಸಭೆಯನ್ನು ಉದ್ಘಾಟಿಸಲು ಪ್ರಧಾನಿಯನ್ನು ಆಹ್ವಾನಿಸಿರುವುದಾಗಿ ದೀದಿ ಹೇಳಿದ್ದಾರೆ.

ಇನ್ನೂ ತ್ರಿಪುರಾದಲ್ಲಿನ ಹಿಂಸಾಚಾರದ ಕುರಿತು ಪ್ರಧಾನಿಯೊಂದಿಗೆ ಮಾತನಾಡಿದ್ದೇನೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಇತ್ತೀಚಿಗೆ ತ್ರಿಪುರ ಸರ್ಕಾರದ ವಿರುದ್ಧ ಕಿಡಿಕಾರಿರುವ ಮಮತಾ ಬ್ಯಾನರ್ಜಿ, ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಮುಖ್ಯಮಂತ್ರಿ ಬಿಪ್ಲವ್ ದೇಬ್ ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

SCROLL FOR NEXT