ದೇಶ

ಮದನಪಲ್ಲಿ ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೋ ಬೆಲೆ 130 ರೂ.ಗೆ ಏರಿಕೆ!

Nagaraja AB

ಚಿತ್ತೂರು: ಏಷ್ಯಾದ ಅತಿದೊಡ್ಡದಾದ ಮದನಪಲ್ಲಿ ಮಾರುಕಟ್ಟೆಯಲ್ಲಿ  ಟೊಮೆಟೋ ಸಗಟು ಬೆಲೆ ಕೆಜಿಗೆ 130 ರೂ. ಆಗಿದೆ. ವಾರದ ಹಿಂದಷ್ಟೇ 60 ರೂಪಾಯಿ ಇತ್ತು. ಮದನಪಲ್ಲಿ ಮತ್ತಿತರ ಕಡೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಟೊಮೆಟೋ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದ್ದು, ತರಕಾರಿಗಳ ಕೊರತೆಗೂ ಕಾರಣವಾಗಿದೆ. 

300 ರಿಂದ 400 ಮೆಟ್ರಿಕ್ ಟನ್ ಅಗತ್ಯವಿದ್ದು, ಮಂಗಳವಾರ ಕೇವಲ 150 ಮೆಟ್ರಿಕ್ ಟನ್ ಮಾತ್ರ ಮಾರುಕಟ್ಟೆಗೆ ತಲುಪಿದೆ. ನವೆಂಬರ್ 16 ರಂದು ಕೆಜಿಗೆ 76 ರೂ. ನಷ್ಟಿದ್ದ  ಹೆಚ್ಚಿನ ಗುಣಮಟ್ಟದ ಟೊಮೆಟ್ಯೋ ಬೆಲೆ ನೆವೆಂಬರ್ 20 ರಂದು ರೂ.92ಕ್ಕೆ, ತದನಂತರ ನವೆಂಬರ್ 22 ರಂದು 104 ರೂ.ಗೆ ಏರಿಕೆಯಾಗಿತ್ತು. ಮಂಗಳವಾರ ಅದು 130 ರೂಪಾಯಿಗೆ ಮುಟ್ಟಿದೆ ಎಂದು ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಮತ್ತು ತಮಿಳುನಾಡಿನಲ್ಲೂ ಟೊಮೆಟ್ಯೋ ಬೆಳೆಗಾರರ ಮೇಲೆ ತೀವ್ರ ರೀತಿಯ ಪರಿಣಾಮ ಬೀರಿದೆ. ಕಾರ್ತಿಕ ಮಾಸದಲ್ಲಿ ಜನರು ಮಾಂಸಾಹಾರ ಸೇವಿಸದಿರುವುದು ಮತ್ತು ಮದುವೆ ಕಾರ್ಯಕ್ರಮಗಳಿಂದಾಗಿ ಟೊಮೆಟ್ಯೋ ಬೆಲೆ ನಿರಂತರವಾಗಿ ಏರುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. 

ಮದನಪಲ್ಲಿ ಮಾರುಕಟ್ಟೆಯಿಂದ ಮಧುರೈ, ಚೆನ್ನೈ,ಕುಂಬಕೋಣಂ, ತಮಿಳುನಾಡು, ಪುದುಚೇರಿ, ತೆಲಂಗಾಣ, ಮಹಾರಾಷ್ಟ್ರ, ಛತ್ತೀಸ್ ಗಢ, ಗುಜರಾತ್, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟ್ಯೋವನ್ನು ರವಾನಿಸಲಾಗುತ್ತದೆ. 

SCROLL FOR NEXT