ದೇಶ

ವೇಗವಾಗಿ ಬಂದು ರೈಲು ಡಿಕ್ಕಿ: ಹಳಿ ದಾಟುತ್ತಿದ್ದ ಹೆಣ್ಣಾನೆ ಮತ್ತದರ ಎರಡು ಮರಿಗಳ ದಾರುಣ ಸಾವು

Shilpa D

ಕೊಯಂಬತ್ತೂರು: ​ಒಂದು ಹೆಣ್ಣಾನೆ ಮತ್ತು ಅದರ ಎರಡು ಪುಟ್ಟ ಹೆಣ್ಣು ಮರಿಗಳು ರೈಲು ಡಿಕ್ಕಿ ಹೊಡೆದು ಮೃತಪಟ್ಟ ಹೃದಯವಿದ್ರಾವಕ ಘಟನೆ ಶುಕ್ರವಾರ ರಾತ್ರಿ ತಮಿಳುನಾಡು-ಕೇರಳದ ಗಡಿಯಾದ ನವಕ್ಕರೈ ಸಮೀಪದ ಮಾವುತ್ತಂಪತ್ತಿ ಗ್ರಾಮದ ಬಳಿ ನಡೆದಿದೆ.

25 ವರ್ಷದ ಹೆಣ್ಣಾನೆ ಹಾಗೂ ಅದರ 12 ವರ್ಷದ ಎರಡು ಮರಿಗಳು ರೈಲು ಹಳಿ ದಾಟುತ್ತಿದ್ದಾಗ ಮಂಗಳೂರು–ಚೆನ್ನೈ ಎಕ್ಸಪ್ರೆಸ್‌ ರೈಲು ಡಿಕ್ಕಿಯಾಗಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಮಡುಕ್ಕುರೈ ಬಳಿ ರಾತ್ರಿ 9 ರ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆ ಸಂಭವಿಸಿದಾಗ ರೈಲು ಅತಿ ವೇಗವಾಗಿ ಚಲಿಸುತ್ತಿತ್ತು, ಡಿಕ್ಕಿ ರಭಸಕ್ಕೆ ಆನೆಗಳು ಸ್ಥಳದಲ್ಲೇ ಮೃತಪಟ್ಟಿವೆ. ಸ್ಥಳಕ್ಕೆ ಕಾರ್ಯಾಚರಣೆ ತಂಡ ತೆರಳಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳೂರು–ಚೆನ್ನೈ ಎಕ್ಸಪ್ರೆಸ್‌ ರೈಲು ಕೇರಳದ ಕೋಯಿಕ್ಕೋಡ್ ಹಾಗೂ ಪಾಲಕ್ಕಾಡ್ ಮಾರ್ಗವಾಗಿ ಚೆನ್ನೈಗೆ ತೆರಳುತ್ತದೆ.,ಕೊಯಮತ್ತೂರು ಬಳಿ ಇತ್ತೀಚೆಗೆ ಆನೆಗಳ ಅಸಹಜ ಸಾವು ಹೆಚ್ಚುತ್ತಿದ್ದು ಇದು ಪರಿಸರ ಹಾಗೂ ಪ್ರಾಣಿ ಪ್ರಿಯರಲ್ಲಿ ಆತಂಕ ಮೂಡಿಸಿದೆ.

ಆನೆಗಳು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡಿದ್ದಾರೆ.  ರಾತ್ರಿ ಕತ್ತಲಿದ್ದರೂ ಆನೆಯ ಮೃತದೇಹಗಳನ್ನು ಹಳಿಯ ಮೇಲಿಂದ ತೆಗೆಯಲಾಗಿದ್ದು, ಇಂದು ಪೋಸ್ಟ್​ಮಾರ್ಟಮ್​ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.  

ಘಟನೆಯ ಪ್ರಾಥಮಿಕ ತನಿಖೆ ನಡೆಸಲು ಜಿಲ್ಲಾ ಅರಣ್ಯಾಧಿಕಾರಿ ಟಿ.ಕೆ.ಅಶೋಕ್​ ಕುಮಾರ್ ಸೇರಿ ಇಲಾಖೆಯ ಇತರ ಉನ್ನತ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.  ಹಾಗೇ, ರೈಲಿನ ಲೋಕೋ ಪೈಲಟ್​ ನೀಡಿದ ಮಾಹಿತಿ ಅನ್ವಯ ರೈಲ್ವೆ ಪೊಲೀಸರೂ ಕೂಡ ಸ್ಥಳಕ್ಕೆ ತೆರಳಿದ್ದಾರೆ.

SCROLL FOR NEXT