ದೇಶ

ಸರ್ಕಾರಿ ನೌಕರಿ ಕೊಡಿಸುವುದಾಗಿ ವಂಚನೆ: ತಮಿಳುನಾಡು ಮಾಜಿ ಸಿಎಂ ಪಳನಿಸ್ವಾಮಿ ಆಪ್ತ ಸಹಾಯಕನ ಬಂಧನ

Lingaraj Badiger

ಕೊಯಮತ್ತೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಹಲವರಿಂದ ಲಕ್ಷ, ಲಕ್ಷ ರೂಪಾಯಿ ವಸೂಲಿ ಮಾಡಿದ ಆರೋಪದ ಮೇಲೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಇಕೆ.ಪಳನಿಸ್ವಾಮಿ ಅವರ ಆಪ್ತ ಸಹಾಯಕ(ಪಿಎ)ನನ್ನು ಭಾನುವಾರ ನೆರೆಯ ಸೇಲಂ ಜಿಲ್ಲೆಯ ಓಮಲೂರಿನಲ್ಲಿ ಬಂಧಿಸಲಾಗಿದೆ.

ಸಾರಿಗೆ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿ ಆಪ್ತ ಸಹಾಯಕ ಮಣಿ ಅವರಿಂದ 17 ಲಕ್ಷ ರೂ.ಗಳನ್ನು ಪಡೆದಿದ್ದರು. ಆದರೆ ಕೆಲಸ ಕೊಡಿಸಿಲ್ಲ ಮತ್ತು ತನ್ನ ದೂರು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ನೆಯ್ವೇಲಿಯ ತಮಿಳ್ಸೆಲ್ವನ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಸೇಲಂ ಕ್ರೈಂ ಬ್ರಾಂಚ್ ಒಂದು ತಿಂಗಳ ಹಿಂದೆ ಮಾಜಿ ಸಿಎಂ ಪಿಎ ವಿರುದ್ಧ ಪ್ರಕರಣ ದಾಖಲಿಸಿತ್ತು.

ಪೊಲೀಸರು ಬ್ರೋಕರ್ ಸೆಲ್ವಕುಮಾರ್ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.

ಮಣಿ ಅವರು ನಿರೀಕ್ಷಣಾ ಜಾಮೀನು ಕೋರಿ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು, ಆದರೆ ಕೋರ್ಟ್ ಅವರ ಜಾಮೀನು ಅರ್ಜಿ ತಿರಸ್ಕರಿಸಿದ ನಂತರ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಸಹ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ್ದರಿಂದ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ಮಣಿ ಇನ್ನು ಕೆಲವರಿಂದ ಸರ್ಕಾರಿ ಕೆಲಸ ಕೊಡಿಸುವುದಾಗಿ 50 ಲಕ್ಷ ರೂಪಾಯಿಗೂ ಅಧಿಕ ಹಣ ಪಡೆದಿರುವ ಬಗ್ಗೆ ದೂರುಗಳು ಬಂದಿದ್ದು, ಪೊಲೀಸರು ಮಣಿಯನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

SCROLL FOR NEXT