ದೇಶ

ಸಂಸತ್ತಿನ ಚಳಿಗಾಲ ಅಧಿವೇಶನ ಇಂದು ಆರಂಭ: ಸರ್ಕಾರದ ಆದ್ಯತೆಗಳೇನು, ಪ್ರತಿಪಕ್ಷಗಳು ಬಯಸುತ್ತಿರುವುದೇನು?

Sumana Upadhyaya

ನವದೆಹಲಿ: ಸಂಸತ್ತಿನ ಚಳಿಗಾಲ ಅಧಿವೇಶನ ಸೋಮವಾರ(ನ.29) ಆರಂಭವಾಗುತ್ತಿದೆ. ಅದಕ್ಕೂ ಮುನ್ನ ಲೋಕಸಭೆಯ ವ್ಯವಹಾರ ಸಲಹಾ ಸಮಿತಿ (Business Advisory Committee (BAC)ಯ ಸಭೆ ಇಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ಇಂದು ಅಧಿವೇಶನ ಆರಂಭಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಸದನದ ಹೊರಗೆ ಮಾತನಾಡಿ ಪ್ರತಿಪಕ್ಷಗಳನ್ನು ಸುಗಮ ಕಲಾಪಕ್ಕೆ ಸಹಕಾರ ಕೋರುವ ನಿರೀಕ್ಷೆಯಿದೆ. 

ಇದಕ್ಕೂ ಮುನ್ನ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನಿನ್ನೆ ಸರ್ವಪಕ್ಷ ಸಭೆ ನಡೆಸಿದ್ದರು. ಅದರಲ್ಲಿ 31 ರಾಜಕೀಯ ಪಕ್ಷಗಳಿಂದ 42 ಮುಖಂಡರು ಭಾಗಿಯಾಗಿದ್ದರು.ರೈತರ ಪ್ರತಿಭಟನೆಯಿಂದ ಹಿಡಿದು ಹಣದುಬ್ಬರದವರೆಗೆ ವಿವಿಧ ವಿಷಯಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ನಿರ್ಧರಿಸಿವೆ. ಈ ಮಧ್ಯೆ, ಸಂಸತ್ತು ಸುಗಮವಾಗಿ ನಡೆಯಲು ಅವಕಾಶ ನೀಡುವಂತೆ ಸರ್ಕಾರ ವಿರೋಧ ಪಕ್ಷಗಳನ್ನು ಒತ್ತಾಯಿಸಿದೆ.

ಮೊದಲ ದಿನ ಇಂದು ಲೋಕಸಭೆಯಲ್ಲಿ ರಾಷ್ಟ್ರವ್ಯಾಪಿ ಅದರಲ್ಲೂ ಪಂಜಾಬ್, ಹರ್ಯಾಣ ಭಾಗದ ರೈತರ ಪ್ರತಿಭಟನೆಗೆ ಕಾರಣವಾದ ಮೂರು ತಿದ್ದುಪಡಿ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ. ಕಾನೂನು ರದ್ದತಿ ಮಸೂದೆಯನ್ನು ಕೇಂದ್ರ ಸಚಿವ ಸಂಪುಟ ಕಳೆದ ವಾರ ಅಂಗೀಕರಿಸಿದೆ. ಸಂಸತ್ತಿನ ಕೆಳಮನೆಯಲ್ಲಿ ಇಂದು ವಾಪಾಸಾತಿಗೆ ಅಂಗೀಕಾರ ಪಡೆದ ನಂತರ ಇಂದೇ ರಾಜ್ಯಸಭೆಯಲ್ಲಿ ಮಂಡಿಸುವ ಸಾಧ್ಯತೆಯಿದೆ.

ರೈತರು ಸಹ ಸರ್ಕಾರದ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮೂರು ಕಾನೂನುಗಳನ್ನು ರದ್ದುಗೊಳಿಸಲಾಗುವುದು ಎಂದು ಪ್ರಧಾನಿ ಘೋಷಿಸಿದ ನಂತರವೂ ಕೂಡ ರೈತರು ಪ್ರಧಾನಿ ಮಾತುಗಳಲ್ಲಿ ನಂಬಿಕೆಯಿಲ್ಲ, ಕಾಯ್ದೆಯನ್ನು ಸರ್ಕಾರ ಮೊದಲು ರದ್ದುಪಡಿಸಲಿ ಎಂದು ಹೇಳುತ್ತಿದ್ದಾರೆ.

ಕಳೆದ ವರ್ಷ ನವೆಂಬರ್‌ನಿಂದ ನಡೆಯುತ್ತಿರುವ ರೈತರ  ಪ್ರತಿಭಟನೆಯನ್ನು ಕೊನೆಗೊಳಿಸಲು ಇದೀಗ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮೇಲೆ ಹೊಸ ಬೇಡಿಕೆಗಳನ್ನು ಇಟ್ಟಿದ್ದಾರೆ.

ಈ ಚಳಿಗಾಲ ಅಧಿವೇಶನವನ್ನು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಪ್ರಮುಖವಾಗಿ ಪರಿಗಣಿಸಿದೆ. 3 ತಿದ್ದುಪಡಿ ಕೃಷಿ ಕಾಯ್ದೆ ವಾಪಸ್ ಪಡೆಯುವುದು ಸೇರಿದಂತೆ 26 ಹೊಸ ಮಸೂದೆಗಳನ್ನು ಮಂಡಿಸುವ ಉದ್ದೇಶವನ್ನು ಕೂಡ ಹೊಂದಿದೆ.

ಕಲಾಪ ಆರಂಭದ ದಿನವೇ ಕೃಷಿ ಕಾಯ್ದೆಯನ್ನು ವಾಪಾಸ್ ಪಡೆಯುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಈ ವಾರದ ಆರಂಭದಲ್ಲಿ ಕೇಂದ್ರ ಸಚಿವ ಸಂಪುಟವು ಮಸೂದೆಯನ್ನು ಅಂಗೀಕರಿಸಿತ್ತು. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಭೆಯ ನಂತರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸುದ್ದಿಗಾರರಿಗೆ ತಿಳಿಸಿದ್ದರು.

ಸರ್ಕಾರದ ಕಾರ್ಯಸೂಚಿಯು ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ಬಿಲ್, 2021 ರ ನಿಯಂತ್ರಣವನ್ನು ಸಹ ಒಳಗೊಂಡಿದೆ. ಇಂದು ಬಿಜೆಪಿ ಸಂಸದೀಯ ಕಾರ್ಯಕಾರಿ ಸಮಿತಿಯು ಭಾನುವಾರ ಸಂಸತ್ತಿನ ಅನೆಕ್ಸ್‌ನಲ್ಲಿ ಪ್ರತ್ಯೇಕವಾಗಿ ಸಭೆ ನಡೆಸಲಿದೆ. ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಇಂದು ಸರ್ವಪಕ್ಷ ಸಭೆ ನಡೆಯಲಿದೆ.

SCROLL FOR NEXT