ದೇಶ

ಕೃಷಿ ತಿದ್ದುಪಡಿ ಕಾಯ್ದೆ ರದ್ದತಿ ಬಗ್ಗೆ ನಾವು ಸರ್ಕಾರದ ಚರ್ಚೆ, ವಿವರಣೆ ಕೇಳುತ್ತಿದ್ದೇವೆ: ಮಲ್ಲಿಕಾರ್ಜುನ ಖರ್ಗೆ

Sumana Upadhyaya

ನವದೆಹಲಿ: ಕೇಂದ್ರ ಸರ್ಕಾರ ಮೂರು ಕೃಷಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆದಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಕಳೆದ ವರ್ಷದಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಂಭವಿಸಿದ ಹಲವು ಘಟನೆಗಳ ಬಗ್ಗೆ ಚರ್ಚೆ ನಡೆಸಬೇಕೆಂದು ನಾವು ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇಂದು ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷವಾದ ಬಿಜೆಪಿ ಕಳೆದ ವರ್ಷ ಜಾರಿಗೆ ತಂದಿದ್ದ ಮೂರು ಕೃಷಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲು ಲೋಕಸಭೆಯಲ್ಲಿ ಮಂಡಿಸಿತ್ತು. ಆದರೆ ವಿರೋಧ ಪಕ್ಷದ ನಾಯಕರು ತೀವ್ರ ಗದ್ದಲ, ಕೋಲಾಹಲ ಎಬ್ಬಿಸಿದ್ದರಿಂದ ಮಧ್ಯಾಹ್ನದವರೆಗೆ ಮುಂದೂಡಿ ನಂತರ ಪುನಃ ಅಧಿವೇಶನ ಸೇರಿದಾಗ ತರಾತುರಿಯಲ್ಲಿ ಮತ್ತೆ ಪ್ರತಿಪಕ್ಷಗಳ ಗದ್ದಲ ನಡುವೆ ಅಂಗೀಕಾರ ಪಡೆಯಲಾಯಿತು.

ಇದೀಗ ಮಧ್ಯಾಹ್ನ 2 ಗಂಟೆಗೆ ರಾಜ್ಯಸಭೆಯಲ್ಲಿ ಕೃಷಿ ತಿದ್ದುಪಡಿ ಕಾಯ್ದೆ ಮಂಡನೆಯಾಗುತ್ತಿದ್ದು ಅಲ್ಲಿ ವಿರೋಧ ಪಕ್ಷಗಳ ಸಹಕಾರವನ್ನು ಸರ್ಕಾರ ಅನುಮೋದನೆಗೆ ಕೋರಿದೆ.

ಕೃಷಿ ಕಾಯ್ದೆ ಹಿಂಪಡೆದ ಬಗ್ಗೆ, ರೈತರ ಪ್ರತಿಭಟನೆ, ಕನಿಷ್ಠ ಬೆಂಬಲ ಬೆಲೆ ಕುರಿತು ನಾವು ಸರ್ಕಾರ ಬಳಿ ವಿವರಣೆ ಕೇಳುತ್ತಿದ್ದೇವೆ. ಆದರೆ ಸರ್ತಾರ ತರಾತುರಿಯಿಂದ ಲೋಕಸಭೆಯಲ್ಲಿ ಅಂಗೀಕಾರ ಪಡೆದಿದ್ದು ತಾವು ರೈತರ ಪರವಾಗಿದ್ದೇವೆ ಎಂದು ತೋರಿಸಿಕೊಳ್ಳುತ್ತಿದ್ದಾರಷ್ಟೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

SCROLL FOR NEXT