ದೇಶ

ಭತ್ತ ಖರೀದಿ ವಿಳಂಬ ಖಂಡಿಸಿ ಪಂಜಾಬ್, ಹರಿಯಾಣದಾದ್ಯಂತ ರೈತರಿಂದ ಪ್ರತಿಭಟನೆ

Lingaraj Badiger

ಚಂಡೀಗಢ: ಭತ್ತ ಖರೀದಿ ಮುಂದೂಡುತ್ತಿರುವುದನ್ನು ವಿರೋಧಿಸಿ ಪಂಜಾಬ್ ಮತ್ತು ಹರಿಯಾಣದ ರೈತರು ಅನೇಕ ಸ್ಥಳಗಳಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಭತ್ತ ಖರೀದಿಯಲ್ಲಿನ ವಿಳಂಬ ಖಂಡಿಸಿ ಎರಡೂ ರಾಜ್ಯಗಳ ಶಾಸಕರ ನಿವಾಸಗಳ ಹೊರಗೆ ಪ್ರತಿಭಟನೆ ನಡೆಸುವಂತೆ 
ಸಂಯುಕ್ತ ಕಿಸಾನ್ ಮೋರ್ಚಾ ಶುಕ್ರವಾರ ಕರೆ ನೀಡಿತ್ತು. ಅದರಂತೆ ಇಂದು ಪಂಜಾಬ್ ಮತ್ತು ಹರಿಯಾಣದ ವಿವಿಧ ಸ್ಥಳಗಳಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಸಾಮಾನ್ಯವಾಗಿ ಅಕ್ಟೋಬರ್ 1 ರಿಂದ ಭತ್ತ ಖರೀದಿ ಆರಂಭವಾಗುತ್ತದೆ. ಆದರೆ ಕೇಂದ್ರ ಸರ್ಕಾರ ಗುರುವಾರ ಪಂಜಾಬ್ ಮತ್ತು ಹರಿಯಾಣದಲ್ಲಿ ಖಾರಿಫ್ ಭತ್ತ ಖರೀದಿಯನ್ನು ಅಕ್ಟೋಬರ್ 11 ರವರೆಗೆ ಮುಂದೂಡಿದೆ. 

ಈ ಮಧ್ಯೆ, ಕೇಂದ್ರದ ಹೊಸ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆ "ದಿನದಿಂದ ದಿನಕ್ಕೆ ಹಿಂಸಾತ್ಮಕ" ವಾಗುತ್ತಿದೆ ಎಂದು ಹರಿಯಾಣ ಸಚಿವ ಅನಿಲ್ ವಿಜ್ ಅವರು ಶನಿವಾರ ಹೇಳಿದ್ದಾರೆ.

"ರೈತರ ಆಂದೋಲನ ದಿನದಿಂದ ದಿನಕ್ಕೆ ಹಿಂಸಾತ್ಮಕವಾಗುತ್ತಿದೆ. ಮಹಾತ್ಮ ಗಾಂಧಿ ದೇಶದಲ್ಲಿ ಹಿಂಸಾತ್ಮಕ ಚಳುವಳಿಯನ್ನು ಅನುಮತಿಸಲಾಗುವುದಿಲ್ಲ" ಎಂದು ಅನಿಲ್ ವಿಜ್ ಟ್ವೀಟ್ ಮಾಡಿದ್ದಾರೆ.

SCROLL FOR NEXT