ದೇಶ

ಪ್ರಿಯಾಂಕಾ ಗಾಂಧಿ ಬಂಧನ ಕಾನೂನುಬಾಹಿರ, 24 ಗಂಟೆಗಳಿಗಿಂತ ಹೆಚ್ಚು ಕಾಲ ಬಂಧಿಸುವಂತಿಲ್ಲ: ಚಿದಂಬರಂ

Lingaraj Badiger

ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಂಧನ "ಸಂಪೂರ್ಣ ಕಾನೂನುಬಾಹಿರ" ಎಂದಿರುವ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಅವರು, ಉತ್ತರ ಪ್ರದೇಶದಲ್ಲಿ ಕಾನೂನಿಗೆ ಬೆಲೆ ಇಲ್ಲ ಎಂದು ಅಲ್ಲಿನ ಪೊಲೀಸರು ದೃಢಪಡಿಸಿದ್ದಾರೆ ಎಂದು ಮಂಗಳವಾರ ಆರೋಪಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಪೊಲೀಸರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾನೂನು ಮತ್ತು ಅವರ ಆದೇಶವನ್ನು ಮಾತ್ರ ಪಾಲಿಸುತ್ತಿದ್ದಾರೆ ಎಂದು ಚಿದಂಬರಂ ದೂರಿದ್ದಾರೆ.

ಲಖಿಂಪುರ್ ಖೇರಿಯಲ್ಲಿ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಸೀತಾಪುರದಲ್ಲಿ ಬಂಧಿಸಲಾಯಿತು.

ಸೀತಾಪುರದಲ್ಲಿ ಪ್ರಿಯಾಂಕಾ ಗಾಂಧಿಯ ಬಂಧನಕ್ಕೆ ಸಂಬಂಧಿಸಿದ ಸತ್ಯಗಳು ಮತ್ತು ಸನ್ನಿವೇಶಗಳು "ಉತ್ತರ ಪ್ರದೇಶದಲ್ಲಿ ಕಾನೂನಿನ ನಿಯಮವಿಲ್ಲ ಎಂದು ಖಚಿತವಾಗಿ ದೃಢಪಡಿಸುತ್ತದೆ" ಎಂದು ಚಿದಂಬರಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

"ಅಕ್ಟೋಬರ್ 4, ಸೋಮವಾರ ಬೆಳಗ್ಗೆ 4.30ಕ್ಕೆ ಪ್ರಿಯಾಂಕಾ ಗಾಂಧಿಯನ್ನು ಬಂಧಿಸಲಾಗಿದೆ. ಸೀತಾಪುರದ ಪಿಎಸಿ ಅತಿಥಿ ಗೃಹದಲ್ಲಿ ಅವರನ್ನು ಬಂಧಿಸಲಾಗಿದೆ. ಜಿಲ್ಲಾಧಿಕಾರಿ ಮತ್ತು ಸಂಬಂಧಿತ ನ್ಯಾಯಾಧೀಶರು ಇಬ್ಬರೂ ಸೀತಾಪುರದಲ್ಲೇ ನೆಲೆಸಿದ್ದಾರೆ. ಗಾಂಧಿಯ ಬಂಧನ ಸಂಪೂರ್ಣವಾಗಿ ಕಾನೂನುಬಾಹಿರ ಮತ್ತು ಅಧಿಕಾರದ ದುರುಪಯೋಗ" ಎಂದು ಕೇಂದ್ರ ಮಾಜಿ ಗೃಹ ಸಚಿವ ಚಿದಂಬರಂ ಹೇಳಿದ್ದಾರೆ.

"ಪೊಲೀಸ್ ಅಧಿಕಾರಿ ಪ್ರಿಯಾಂಕಾ ಗಾಂಧಿಯನ್ನು ಸಿಆರ್‌ಪಿಸಿ ಸೆಕ್ಷನ್ 151 ರ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಸೆಕ್ಷನ್ 151 ರ ಅಡಿಯಲ್ಲಿ ಬಂಧಿಸಿದ ಯಾವುದೇ ವ್ಯಕ್ತಿಯನ್ನು ನ್ಯಾಯಾಧೀಶರ ಆದೇಶವಿಲ್ಲದೆ 24 ಗಂಟೆಗಳಿಗಿಂತ ಹೆಚ್ಚು ಕಾಲ ಬಂಧಿಸುವಂತಿಲ್ಲ" ಎಂದು ಚಿದಂಬರಂ ಹೇಳಿದ್ದಾರೆ.

SCROLL FOR NEXT