ದೇಶ

ಹಡಗಿನಲ್ಲಿ ಎನ್ ಸಿಬಿ ದಾಳಿ ನಕಲಿ; ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ: ಎನ್ ಸಿಪಿ

Nagaraja AB

ಮುಂಬೈ: ಅಕ್ಟೋಬರ್ 2 ರಂದು ಮುಂಬೈ ಕರಾವಳಿಯಲ್ಲಿ ಹಡಗೊಂದರ ಮೇಲೆ ನಡೆದ ಎನ್ ಸಿಬಿ ದಾಳಿ ನಕಲಿ ಎಂದು ಎನ್ ಸಿಪಿ ಆರೋಪಿಸಿದ್ದು, ಹಡಗಿನೊಳಗೆ ಯಾವುದೇ ಮಾದಕ ವಸ್ತು ಪತ್ತೆಯಾಗಿಲ್ಲ ಎಂದು ಬುಧವಾರ ಹೇಳಿದೆ.

ದಾಳಿ ವೇಳೆಯಲ್ಲಿ ಎನ್ ಸಿಬಿ ತಂಡದೊಂದಿಗಿದ್ದ ಇಬ್ಬರ ವ್ಯಕ್ತಿಗಳ ಕುರಿತು ಪ್ರಶ್ನಿಸಿದೆ. ಇದರಲ್ಲಿ ಒಬ್ಬ ಬಿಜೆಪಿ ಸದಸ್ಯನಾಗಿದ್ದ ಎಂದು ಆರೋಪಿಸಿದೆ. ಈ ಕುರಿತಂತೆ ಬಿಜೆಪಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಶನಿವಾರ ಗೋವಾಕ್ಕೆ ಹೋಗುತ್ತಿದ್ದ ಹಡಗಿನಲ್ಲಿ ಮಾದಕ ವಸ್ತು ವಶ ಆರೋಪದ ನಂತರ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಸೇರಿದಂತೆ ಈವರೆಗೂ 17 ಮಂದಿಯನ್ನು ಎನ್ ಸಿಬಿ ಬಂಧಿಸಿದೆ. 

ಎನ್ ಸಿಬಿ ದಾಳಿ ನಕಲಿ, ಹಡಗಿನಲ್ಲಿ ಅವರು ಯಾವುದೇ ಡ್ರಗ್ಸ್ ಪತ್ತೆ ಮಾಡಿಲ್ಲ ಎಂದು ಎನ್ ಸಿಪಿ ವಕ್ತಾರ ಮತ್ತು ಮಹಾರಾಷ್ಟ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲ್ಲಿಕ್ ಸುದ್ದಿಗಾರರಿಗೆ ತಿಳಿಸಿದರು. 

ದಾಳಿ ಕುರಿತಂತೆ ಅವರು ಕೆಲವೊಂದು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ವಿಡಿಯೋ ಒಂದರಲ್ಲಿ ಆರ್ಯನ್ ಖಾನ್ ಅವರನ್ನು ಬೆಂಗಾವಲು ಮಾಡುತ್ತಿರುವ ವ್ಯಕ್ತಿ ಎನ್‌ಸಿಬಿ ಅಧಿಕಾರಿಯಲ್ಲ ಮತ್ತು ಅವರು ಕೌಲಾಲಂಪುರ್ ಮೂಲದ ಖಾಸಗಿ ಪತ್ತೆದಾರಿ ಎಂಬುದು ಅವರ ಸಾಮಾಜಿಕ ಮಾಧ್ಯಮ ಪ್ರೊಫೈಲ್  ಹೇಳುತ್ತದೆ ಎಂದು ಎನ್ ಸಿಪಿ ಮುಖಂಡ ಆರೋಪಿಸಿದರು. 

ಇದಲ್ಲದೆ, ಇದೇ ಪ್ರಕರಣದಲ್ಲಿ ಬಂಧಿಸಲಾಗಿರುವ ಅರ್ಬಾಜ್ ಮರ್ಚೆಂಟ್ ನ್ನು  ಇಬ್ಬರು ವ್ಯಕ್ತಿಗಳು  ಬೆಂಗಾವಲು ಮಾಡುತ್ತಿರುವುದನ್ನು ನೋಡಬಹುದಾಗಿದೆ. ಇದರಲ್ಲಿ ಒಬ್ಬ ವ್ಯಕ್ತಿ ಬಿಜೆಪಿ ಸದಸ್ಯ,  ಎಂದು ಮಲಿಕ್ ಆರೋಪಿಸಿದ್ದಾರೆ.ಈ ಇಬ್ಬರು ವ್ಯಕ್ತಿಗಳು ಎನ್ ಸಿಬಿ ಅಧಿಕಾರಿಗಳಲ್ಲದಿದ್ದಲ್ಲಿ ಇಬ್ಬರು ಹೈಪ್ರೊಫೈಲ್ ಜನರಿಗೆ ಏಕೆ ಬೆಂಗಾವಲು ಆಗುತ್ತಾರೆ ಎಂದು ಅವರು ಪ್ರಶ್ನಿಸಿದರು.

SCROLL FOR NEXT