ದೇಶ

ಮಾಸಾಂತ್ಯಕ್ಕೆ ಅಯೋಧ್ಯೆ ರಾಮ ಮಂದಿರದ ಅಡಿಪಾಯ ಕಾಮಗಾರಿ ಪೂರ್ಣ; 2023ಕ್ಕೆ ಪ್ರತಿಷ್ಠಾಪನೆ: ವಿಹೆಚ್ ಪಿ

Srinivas Rao BV

ನವದೆಹಲಿ: ಅಯೋಧ್ಯೆ ರಾಮ ಮಂದಿರದ ಅಡಿಪಾಯ ಕಾಮಗಾರಿ ಅಕ್ಟೋಬರ್ ಮಾಸಾಂತ್ಯಕ್ಕೆ ಪೂರ್ಣಗೊಳ್ಳಲಿದ್ದು 2023ಕ್ಕೆ ಮಂದಿರದಲ್ಲಿ ಭಗವಾನ್ ರಾಮಚಂದ್ರನ ಪ್ರತಿಷ್ಠಾಪನೆ ನೆರವೇರಲಿದೆ ಎಂದು ವಿಶ್ವಹಿಂದೂ ಪರಿಷತ್ ಹೇಳಿದೆ.

2023 ರ ಡಿಸೆಂಬರ್ ವೇಳೆಗೆ ಭಕ್ತಾದಿಗಳು ಭಗವಾನ್ ರಾಮ ಲಲ್ಲಾನ ದರ್ಶನ ಪಡೆಯಬಹುದು ಎಂದು ವಿಹೆಚ್ ಪಿ ಹೇಳಿದೆ. 

400 ಅಡಿ*300 ಅಡಿ, 50 ಅಡಿಗಳ ಭದ್ರ ಅಡಿಪಾಯ ಮಂದಿರಕ್ಕೆ ಹಾಕಲಾಗಿದ್ದು, ಮಂದಿರದ ನೈಜ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ ಎಂದು ಅ.06 ರಂದು ವಿಹೆಚ್ ಪಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ. 

ಕೋವಿಡ್-19 ಪರಿಸ್ಥಿತಿ ಇದ್ದರೂ ಸಹ ಸಹಸ್ರಾರು ಮಂದಿ ಈಗಾಗಲೇ ದೇವಾಲಯ ಪ್ರದೇಶವನ್ನು ಸಂದರ್ಶಿಸುತ್ತಿದ್ದಾರೆ ಎಂದು ವಿಹೆಚ್ ಪಿ ಮಾಹಿತಿ ನೀಡಿದೆ. 

"ಇದೇ ವೇಳೆ ಸರ್ಕಾರ ದೇವಾಲಯಗಳ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡಬೇಕು ಹಾಗೂ ಅವುಗಳನ್ನು ಹಿಂದೂ ಸಮಾಜದ ನಿಯಂತ್ರಣಕ್ಕೆ ಒಪ್ಪಿಸಬೇಕು" ಎಂದು ವಿಹೆಚ್ ಪಿ ಆಗ್ರಹಿಸಿದೆ. 

"ಮಸೀದಿ ಹಾಗೂ ಚರ್ಚ್ ಗಳನ್ನು ಸರ್ಕಾರ ನಿಯಂತ್ರಿಸುತ್ತಿಲ್ಲ" ಎಂದು ವಿಹೆಚ್ ಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಮಿಳಿಂದ್ ಪರಾಂಡೆ ಹೇಳಿದ್ದಾರೆ. "ವಿವಾದಗಳು ತಲೆದೋರಿದಾಗಷ್ಟೇ ಸರ್ಕಾರಗಳು ಹಸ್ತಕ್ಷೇಪ ಮಾಡಬೇಕು ಹಾಗೆ ಇಲ್ಲದೇ ಇದ್ದರೆ ದೇವಾಲಯಗಳನ್ನು ಹಿಂದೂ ಸಮಾಜವೇ ಅದನ್ನು ನಿಯಂತ್ರಿಸಬೇಕು" ಎಂದು ಮಿಳಿಂದ್ ಪರಾಂಡೆ ಒತ್ತಾಯಿಸಿದ್ದಾರೆ.

SCROLL FOR NEXT