ದೇಶ

ಮುಂಬೈ ಡ್ರಗ್ಸ್ ಕೇಸ್: ಎನ್ ಸಿಬಿ ಯಿಂದ ಬಿಜೆಪಿ ನಾಯಕನ ಸಂಬಂಧಿಯ ಬಿಡುಗಡೆ; ಎನ್ ಸಿ ಪಿ ಆರೋಪ

Srinivas Rao BV

ಮುಂಬೈ: ನಾರ್ಕೋಟಿಕ್ಸ್ ನಿಯಂತ್ರಣ ಬ್ಯೂರೋ (ಎನ್ ಸಿಬಿ) ಮುಂಬೈ ನ ಕಡಲತೀರದಲ್ಲಿ ಕ್ರೂಸ್ ಶಿಪ್ ಮೇಲೆ ದಾಳಿ ನಡೆಸಿದಾಗ ಬಂಧಿತರ ಪೈಕಿ ಇಬ್ಬರನ್ನು ಬಿಡುಗಡೆ ಮಾಡಿದೆ. ಈ ಪೈಕಿ ಓರ್ವ ಬಿಜೆಪಿ ನಾಯಕನ ಸಂಬಂಧಿ ಎಂದು ಎನ್ ಸಿಪಿ ಆರೋಪಿಸಿದೆ. 
 
ಹೈಪ್ರೊಫೈಲ್ ಬಿಜೆಪಿ ನಾಯಕನ ಬಾವನನ್ನು ಎನ್ ಸಿಬಿ ಬಿಡುಗಡೆ ಮಾಡಿದ್ದು ಎನ್ ಸಿಬಿಯ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ನಡೆಯನ್ನು ಎನ್ ಸಿಪಿಯ ವಕ್ತಾರ, ಮಹಾರಾಷ್ಟ್ರ ಸಚಿವ ನವಾಬ್ ಮಲೀಕ್ ಪ್ರಶ್ನಿಸಿದ್ದಾರೆ. 

"ಎನ್ ಸಿಬಿ ದಾಳಿಯ ನಂತರ ಮಾತನಾಡಿದ್ದ, ಎನ್ ಸಿಬಿ ಸಮೀರ್ ವಾಂಖೆಡೆ 8-10 ಮಂದಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿ ನೀಡಿದ್ದರು. ಇಡೀ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿ ಅಸ್ಪಷ್ಟ ಸಂಖ್ಯೆಗಳನ್ನು ಹೇಳುವುದಕ್ಕೆ ಹೇಗೆ ಸಾಧ್ಯ? ಒಂದು ವೇಳೆ ಬಂಧನಕ್ಕೊಳಗಾದವರು 10 ಮಂದಿಯಾದರೆ ಇನ್ನಿಬ್ಬರನ್ನು ಬಿಟ್ಟು ಕಳಿಸಿದ್ದೇಕೆ? ಈ ಪೈಕಿ ಒಬ್ಬರು ಬಿಜೆಪಿಯ ಹೈ ಪ್ರೊಫೈಲ್ ನಾಯಕನ ಬಾವ" ಎಂದು ಮಲೀಕ್ ಆರೋಪಿಸಿದ್ದಾರೆ. 

ಎನ್ ಸಿಪಿಯ ನಾಯಕ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಸೇರಿದ್ದ ವಾಣಿಜ್ಯ ಸಂಸ್ಥೆಗಳ ಪ್ರದೇಶಗಳಲ್ಲಿ ಐಟಿ ದಾಳಿ ನಡೆದ ಬೆನ್ನಲ್ಲೇ ಎನ್ ಸಿಪಿ ಈ ಆರೋಪ ಮಾಡಿದೆ. ಎನ್ ಸಿಬಿ ಬಿಟ್ಟುಕಳಿಸಿದ ಬಿಜೆಪಿ ನಾಯಕನ ಸಂಬಂಧಿಯ ಹೆಸರನ್ನು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಗೊಳಿಸುವುದಾಗಿ  ಮಲೀಕ್ ಹೇಳಿದ್ದಾರೆ. 

SCROLL FOR NEXT