ದೇಶ

ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಡಲು ಕೇಂದ್ರ ಸರ್ಕಾರ ಕಾರಣ: ಮಾಜಿ ಸಿಎಂ ಮೆಹಬೂಬಾ ಮುಫ್ತಿ

Lingaraj Badiger

ಶ್ರೀನಗರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡ ತಪ್ಪು ಕ್ರಮಗಳು ಜಮ್ಮು ಮತ್ತು ಕಾಶ್ಮೀರದಲ್ಲಿ "ಹದಗೆಡುತ್ತಿರುವ" ಪರಿಸ್ಥಿತಿಗೆ ಕಾರಣ ಎಂದು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಶುಕ್ರವಾರ ಆರೋಪಿಸಿದ್ದಾರೆ.

ಭಯೋತ್ಪಾದಕರಿಂದ ಹತ್ಯೆಗೀಡಾದ ಶಾಲಾ ಪ್ರಾಂಶುಪಾಲರ ಕುಟುಂಬವನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಫ್ತಿ,

ಕಾಶ್ಮೀರ ಕಣಿವೆಯಲ್ಲಿ ಐದು ದಿನಗಳಲ್ಲಿ ಏಳು ನಾಗರಿಕರು ಉಗ್ರರಿಂದ ಹತರಾಗಿದ್ದಾರೆ. ಸರ್ಕಾರ ಭದ್ರತಾ ಲೋಪಗಳನ್ನು ಸರಿಪಡಿಸಬೇಕು ಎಂದು ಮೆಹಬೂಬಾ ಒತ್ತಾಯಿಸಿದರು.

ಗುರುವಾರ ನಗರದ ಸರ್ಕಾರಿ ಶಾಲೆಯೊಳಗೆ ನುಗ್ಗಿದ ಉಗ್ರರು ಪ್ರಾಂಶುಪಾಲರಾದ ಸುಪಿಂದರ್ ಕೌರ್ ಮತ್ತು ಶಿಕ್ಷಕ ದೀಪಕ್ ಚಂದ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಕಾಶ್ಮೀರದಲ್ಲಿ "ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ ಮತ್ತು ಅದಕ್ಕೆ ಬಿಜೆಪಿ ಸರ್ಕಾರವೇ ಹೊಣೆ ಎಂದು ಮಾಜಿ ಸಿಎಂ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ಹತ್ಯೆಯಾದ ಪ್ರಾಂಶುಪಾಲರಿಗೆ ಇಬ್ಬರು ಪುಟ್ಟ ಮಕ್ಕಳು ಇದ್ದಾರೆ. ಅವರು ಎಲ್ಲಿಗೆ ಹೋಗುತ್ತಾರೆ? ನಮ್ಮ ಸಿಖ್ ಸಹೋದರರು ನಮ್ಮ ಜೊತೆಗಿದ್ದರು ಮತ್ತು ನಮ್ಮ ಕಷ್ಟದ ವರ್ಷಗಳಲ್ಲಿ ನಮ್ಮನ್ನು ಬೆಂಬಲಿಸಿದ್ದಾರೆ. ಅವರ ಮೇಲೆ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ" ಎಂದು ಮುಫ್ತಿ ಹೇಳಿದ್ದಾರೆ.

SCROLL FOR NEXT