ದೇಶ

ಉತ್ತರಾಖಂಡ್ ಸಾರಿಗೆ ಸಚಿವ ಯಶ್ ಪಾಲ್ ಆರ್ಯ, ಆತನ ಎಂಎಲ್ಎ ಪುತ್ರ ಬಿಜೆಪಿಗೆ ಗುಡ್ ಬೈ, ಕಾಂಗ್ರೆಸ್ ಸೇರ್ಪಡೆ

Srinivas Rao BV

ಡೆಹ್ರಾಡೂನ್: ಮುಂದಿನ ವರ್ಷದ ಪ್ರಾರಂಭದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಉತ್ತರಾಖಂಡ್ ನಲ್ಲಿ ಬಿಜೆಪಿಗೆ ತೀವ್ರ ಮುಜುಗರ ಉಂಟಾಗುವ ಬೆಳವಣಿಗೆ ನಡೆದಿದ್ದು, ಸಾರಿಗೆ ಸಚಿವ ಯಶ್ ಪಾಲ್ ಆರ್ಯ ಹಾಗೂ ಆತನ ಪುತ್ರ ರಾಜೀನಾಮೆ ನೀಡಿದ್ದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. 

ಯಶ್ ಪಾಲ್ ಆರ್ಯ ಅವರ ಪುತ್ರ ಸಂಜೀವ್ ಶಾಸಕರಾಗಿದ್ದಾರೆ. ಈ ಇಬ್ಬರೂ ನಾಯಕರು ತಮ್ಮ ಬೆಂಬಲಿಗರೊಂದಿಗೆ ಹರೀಶ್ ರಾವತ್, ಕೆಸಿ ವೇಣುಗೋಪಾಲ್, ಸಣ್ದೀಪ್ ಸುರ್ಜೆವಾಲ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮುನ್ನ ಈ ಇಬ್ಬರು ನಾಯಕರು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದರು.

2007 ರಿಂದ 2014 ಯಶ್ ಪಾಲ್ ಆರ್ಯ ಉತ್ತರಾಖಂಡ್ ನ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಅಷ್ಟೇ ಅಲ್ಲದೇ ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸ್ಪೀಕರ್, ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

2017 ರ ವಿಧಾನಸಭಾ ಚುನಾವಣೆ ವೇಳೆ ಅವರು ಬಿಜೆಪಿ ಸೇರ್ಪಡೆಗೊಂಡಿದ್ದರು. ಈಗ ಮರಳಿ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ. ಯಶ್ ಪಾಲ್ ಆರ್ಯ ಮುಕ್ತೇಶ್ವರ್ ವಿಧಾನಸಭಾ ಕ್ಷೇತ್ರ ಹಾಗೂ ಸಂಜೀವ್ ಆರ್ಯ ನೈನಿತಾಲ್ ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ.

SCROLL FOR NEXT