ದೇಶ

ಲಖಿಂಪುರ್ ಖೇರಿ ಪ್ರಕರಣ: ಆಶಿಶ್ ಮಿಶ್ರಾಗೆ ಜಾಮೀನು ನಿರಾಕರಣೆ, ಮತ್ತೊಬ್ಬ ಆರೋಪಿ ಪೊಲೀಸ್ ವಶಕ್ಕೆ

Lingaraj Badiger

ಲಖಿಂಪುರ ಖೇರಿ: ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಜಾಮೀನು ನೀಡಲು ಕೋರ್ಟ್ ಬುಧವಾರ ನಿರಾಕರಿಸಿದೆ.

ಆಶಿಶ್ ಮಿಶ್ರಾ ಮತ್ತು ಆತನ ಆಪ್ತ ಆಶಿಶ್ ಪಾಂಡೆಯ ಜಾಮೀನು ಅರ್ಜಿಗಳನ್ನು ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಚಿಂತಾ ರಾಮ್ ಅವರು ತಿರಸ್ಕರಿಸಿದ್ದಾರೆ ಎಂದು ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ(ಎಸ್‌ಪಿಒ) ಎಸ್‌ಪಿ ಯಾದವ್ ಅವರು ಪಿಟಿಐಗೆ ತಿಳಿಸಿದ್ದಾರೆ.

12 ಗಂಟೆಗಳ ವಿಚಾರಣೆಯ ನಂತರ ವಿಶೇಷ ತನಿಖಾ ತಂಡದ ಅಧಿಕಾರಿಗಳು ಅಕ್ಟೋಬರ್ 9 ರಂದು ಆಶಿಶ್ ಮಿಶ್ರಾ ಅವರನ್ನು ಬಂಧಿಸಿದ್ದು, ಮಂಗಳವಾರದಿಂದ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ನಿನ್ನೆ ಬಂಧನಕ್ಕೊಳಗಾಗಿರುವ ಮಿಶ್ರಾ ಆಪ್ತ ಶೇಖರ್ ಭಾರತಿಯನ್ನು ಸಹ ನ್ಯಾಯಾಲಯವು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ನಾಲ್ಕು ಜನರನ್ನು ಬಂಧಿಸಿದ್ದಾರೆ - ಆಶಿಶ್ ಮಿಶ್ರಾ, ಲುವಕುಶ್, ಆಶಿಶ್ ಪಾಂಡೆ ಮತ್ತು ಶೇಖರ್ ಭಾರತಿ.

ಈ ಮಧ್ಯೆ, ಆಶಿಶ್ ಮಿಶ್ರಾ ಅವರ ಆಪ್ತ ಸ್ನೇಹಿತನೆಂದು ಹೇಳಲಾದ ಅಂಕಿತ್ ದಾಸ್ ಅವರು ಇಂದು ಬೆಳಗ್ಗೆ ಲಖಿಂಪುರ್‌ನ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

SCROLL FOR NEXT