ದೇಶ

"ನಾವು ಆತನಿಗೆ ಶಿಕ್ಷೆ ನೀಡಿದೆವು": ಸಿಂಘು ಹತ್ಯಾಕಾಂಡದ ಬಗ್ಗೆ ಬಂಧನಕ್ಕೊಳಗಾದ 3 ನಿಹಂಗ್'ರ ಹೇಳಿಕೆ

Srinivas Rao BV

ಚಂಡೀಗಢ: ರೈತರ ಪ್ರತಿಭಟನೆ ಪ್ರದೇಶದಲ್ಲಿ ದಲಿತ ಸಿಖ್ ಕಾರ್ಮಿಕನ ಹತ್ಯೆ ಪ್ರಕರಣದಲ್ಲಿ ಮತ್ತೆ ಮೂವರು ನಿಗಂಗ್'ರನ್ನು ಬಂಧಿಸಲಾಗಿದೆ. ಈ ಪೈಕಿ ಓರ್ವನನ್ನು ಪೊಲೀಸರೇ ಬಂಧಿಸಿದ್ದು, ಇನ್ನಿಬ್ಬರು ಸ್ವತಃ ಪೊಲೀಸರ ಎದುರು ಶರಣಾಗಿದ್ದಾರೆ. 

ಹತ್ಯೆಗೀಡಾದ ಲಖ್ಬೀರ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಪಂಜಾಬ್ ನ ತರಣ್ ತರಣ್ ನ ಗ್ರಾಮ ಚೀಮಾ ಕಲನ್ ನಲ್ಲಿ ನಡೆಸಲಾಯಿತು. ಈ ಅಂತ್ಯಕ್ರಿಯೆಯಲ್ಲಿ ಕುಟುಂಬ ಸದಸ್ಯರನ್ನು ಹೊರತುಪಡಿಸಿದರೆ ಪ್ರಾರ್ಥನೆ ಸಲ್ಲಿಸುವುದಕ್ಕೆ ಸಿಖ್ ಸಮುದಾಯದ ಧಾರ್ಮಿಕ ಮುಖಂಡರು ಬಂದಿರಲಿಲ್ಲ. ಅಷ್ಟೇ ಅಲ್ಲದೇ ಆತನ ಗ್ರಾಮಸ್ಥರೂ ಸಹ ಭಾಗಿಯಾಗಿರಲಿಲ್ಲ.

ಲಖ್ಬೀರ್ ಸಿಂಗ್ ಅವರ ಅಮಾನುಷ ಕೊಲೆ ಸಂಬಂಧ ಸರಬ್ಜಿತ್ ಸಿಂಗ್ ನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು. ಈಗ ಆತನನ್ನು ಹರ್ಯಾಣದ ಸೋನಿಪಾಟ್ ಕೋರ್ಟ್ ಗೆ ಹಾಜರುಪಡಿಸಿ 7 ದಿನಗಳ ವಶಕ್ಕೆ ಪಡೆಯಲಾಗಿದೆ.

ಇದಾದ ಕೆಲವೇ ಗಂಟೆಗಳಲ್ಲಿ ನರೈನ್ ಸಿಂಗ್ ನ್ನು ಅಮೃತ್ ಸರ ಗ್ರಾಮೀಣ ಭಾಗದ ಪೊಲೀಸರು ಬಂಧಿಸಿದ್ದರು. ಈ ಬಳಿಕ ಶನಿವಾರ ಸಂಜೆ ಇನ್ನಿಬ್ಬರು ನಿಹಂಗ್'ರು ಪೊಲೀಸರೆದುರು ಶರಣಾಗಿದ್ದಾರೆ. ವಿಚಾರಣೆಯ ಬಳಿಕ ಅವರನ್ನು ಅಧಿಕೃತವಾಗಿ ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರೆದುರು ಶರಣಾಗುವುದಕ್ಕೂ ಮುನ್ನ ಈ ಇಬ್ಬರೂ ಮಾಧ್ಯಮಗಳೊಂದಿಗೆ ಮಾತನಾಡಿದ್ದು, "ಆತನ ಪಾಪಕ್ಕೆ ಆತನನ್ನು ನಾವು ಶಿಕ್ಷಿಸಿದ್ದೇವೆ" ಎಂಬ ಹೇಳಿಕೆ ನೀಡಿದ್ದಾರೆ. 

"ಬರ್ಗರಿಯಲ್ಲಿ ಅಪಚಾರವೆಸಗಿದವರನ್ನು ಇನ್ನೂ ಬಂಧಿಸಬೇಕಾಗಿದೆ. ಆದರೆ ಈ ರೀತಿ ಇನ್ನು ಮುಂದಿನ ದಿನಗಳಲ್ಲಿ ಯಾರಾದರೂ ಮಾಡಿದಲ್ಲಿ ಸ್ಥಳದಲ್ಲೇ ಶಿಕ್ಷೆ  ನೀಡಲಾಗುತ್ತದೆ ಎಂದು ಪೊಲೀಸರೆದುರು ಶರಣಾದವರು" ಹೇಳಿದ್ದಾರೆ.

SCROLL FOR NEXT