ದೇಶ

ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್ ರಿಂದ ಶೀಘ್ರದಲ್ಲೇ ಹೊಸ ಪಕ್ಷ ಘೋಷಣೆ, ಬಿಜೆಪಿ ಜತೆ ಮೈತ್ರಿ ಸಾಧ್ಯತೆ

Lingaraj Badiger

ನವದೆಹಲಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಶೀಘ್ರದಲ್ಲೇ ತಮ್ಮದೇ ಆದ ರಾಜಕೀಯ ಪಕ್ಷವನ್ನು ಕಟ್ಟುವುದಾಗಿ ಬಹಿರಂಗಪಡಿಸಿದ್ದಾರೆ. ಅಲ್ಲದೇ ಅವರು ಬಿಜೆಪಿ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. 

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ದೀರ್ಘಕಾಲದ ಆಂದೋಲನವು ಶೀಘ್ರದಲ್ಲೇ ಮುಗಿಯಲಿದೆ ಎಂದು ಪಂಜಾಬ್ ಮಾಜಿ ಸಿಎಂ ಸುಳಿವು ನೀಡಿದ್ದಾರೆ.

ಪಂಜಾಬ್​ನ ಉತ್ತಮ ಭವಿಷ್ಯಕ್ಕಾಗಿ ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ನನ್ನ ಹೊಸ ರಾಜಕೀಯ ಪಕ್ಷವನ್ನು ಶೀಘ್ರ ಘೋಷಿಸುತ್ತೇನೆ. ಪಂಜಾಬ್ ರಾಜ್ಯ ಮತ್ತು ಅದರ ಜನರ ಹಿತಾಸಕ್ತಿಗಳನ್ನು ಕಾಪಾಡುತ್ತೇನೆ. ಕಳೆದ ಒಂದು ವರ್ಷಗಳಿಂದ ಉಳಿವಿಗಾಗಿ ಹೋರಾಡುತ್ತಿರುವ ರೈತರ ಪರವಾಗಿ ನಿಲ್ಲುತ್ತೇನೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

ಕೇಂದ್ರ ಸರ್ಕಾರವು ರೈತ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಅಮರೀಂದರ್ ಸಿಂಗ್ ಅವರ ನಿರ್ಧಾರವು ಕೃಷಿ ಕಾನೂನು ಸಮಸ್ಯೆಗೆ ನೀಡುವ ಪರಿಹಾರದ ಮೇಲೆ ಅವಲಂಬಿಸಿರುತ್ತದೆ ಎಂದು ತಿಳಿದುಬಂದಿದೆ.

ಅಮರೀಂದರ್ ಅವರು ಬಿಜೆಪಿಯನ್ನು ಹೊರತುಪಡಿಸಿ, ಶಿರೋಮಣಿ ಅಕಾಲಿದಳದ ವಿಘಟನೆಯ ಬಣದೊಂದಿಗೆ, ವಿಶೇಷವಾಗಿ ದಿಂಡಸ ಮತ್ತು ಬ್ರಹ್ಮಪುರ ಬಣದ ಜೊತೆಗೂ ಮೈತ್ರಿಯನ್ನು ಮಾಡಿಕೊಳ್ಳಲು ಚಿಂತಿಸುತ್ತಿದ್ದಾರೆ.

2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸ್ಥಾನ ಹೊಂದಾಣಿಕೆ ಬಗ್ಗೆ ನಿರೀಕ್ಷೆ ಇರಿಸಿಕೊಂಡಿದ್ದೇನೆ. ರೈತರ ಹಿತಾಸಕ್ತಿಗೆ ಪೂರಕವಾಗಿ ರೈತ ಚಳವಳಿಯ ಆಶಯಗಳು ಈಡೇರಿದರೆ ಮಾತ್ರ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವೆ ಎಂದು ಅಮರೀಂದರ್ ಸಿಂಗ್ ಅವರ ಮಾಧ್ಯಮ ಕಾರ್ಯದರ್ಶಿ ರವೀನ್ ಥುಕ್ರಲ್ ಅವರು ಟ್ವೀಟ್ ಮಾಡಿದ್ದಾರೆ.

SCROLL FOR NEXT