ದೇಶ

ತಮಿಳುನಾಡು: ತ್ಯಾಜ್ಯದಲ್ಲಿ ಸಿಕ್ಕ 100 ಗ್ರಾಂ ಚಿನ್ನದ ನಾಣ್ಯವನ್ನು ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೌರ ಕಾರ್ಮಿಕ ಮಹಿಳೆ!

Lingaraj Badiger

ಚೆನ್ನೈ: ತಮಿಳುನಾಡಿನ ತಿರುವೊಟ್ಟಿಯೂರಿನಲ್ಲಿ ಕಸ ವಿಲೇವಾರಿ ವಿಭಾಗದ ಕೆಲಸಗಾರ, ಕಸದೊಳಗೆ ಸಿಕ್ಕ 7.5 ಲಕ್ಷ ರೂಪಾಯಿ ಮೌಲ್ಯದ 100 ಗ್ರಾಂ ಚಿನ್ನದ ನಾಣ್ಯವನ್ನು ಅದರ ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ತಿರುವೊಟ್ಟಿಯೂರಿನ ಅಣ್ಣಾಮಲೈ ನಗರದ ನಾಣ್ಯದ ಮಾಲೀಕ ಗಣೇಶ್ ರಾಮನ್ ಅವರು ಚಿನ್ನದ ನಾಣ್ಯವನ್ನು ಖರೀದಿಸಿ ಅದನ್ನು ಹಾಸಿಗೆಯ ಕೆಳಗೆ ಆಭರಣ ಸುತ್ತುವ ಗುಲಾಬಿ ಬಣ್ಣದ ಕಾಗದದಲ್ಲಿ ಮುಚ್ಚಿಟ್ಟಿದ್ದರು. ಆದರೆ ಅವರ ಪತ್ನಿ ಕಣ್ಣುತಪ್ಪಿ ಚಿನ್ನದ ನಾಣ್ಯವನ್ನು ಇತರ ತ್ಯಾಜ್ಯದೊಂದಿಗೆ ಕಸದ ತೊಟ್ಟಿಯಲ್ಲಿ ಎಸೆದಿದ್ದರು. ನಾಣ್ಯ ನಾಪತ್ತೆಯಾದ ನಂತರ ರಾಮನ್ ಅವರು ಪೊಲೀಸರಿಗೆ ದೂರು ನೀಡಿದ್ದರು.

ಆ ದಿನ ಯಾರು ಕಸವನ್ನು ತೆರವುಗೊಳಿಸುತ್ತಿದ್ದರು ಎಂದು ಪತ್ತೆ ಮಾಡಲು ಪೊಲೀಸರು ಸಿಸಿಟಿವಿ ದಶ್ಯಗಳನ್ನು ಪರಿಶೀಲಿಸಿದ್ದರು. ಆದರೆ ಆಶ್ಚರ್ಯಕರ ರೀತಿಯಲ್ಲಿ ಪೌರ ಕಾರ್ಮಿಕ ಮಹಿಳೆ ಮೇರಿ ಈಗಾಗಲೇ ತನ್ನ ಮ್ಯಾನೇಜರ್ ಮೂಲಕ ಅಧಿಕಾರಿಗಳಿಗೆ ನಾಣ್ಯವನ್ನು ಹಿಂದಿರುಗಿಸಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ತಿಳಿದುಕೊಂಡರು.

ಕಸವನ್ನು ವಿಂಗಡಿಸುವಾಗ, ಮೇರಿ ಚಿನ್ನದ ನಾಣ್ಯ ಸಿಕ್ಕಿದ್ದು, ಯಾವುದೇ ಮರು ಆಲೋಚನೆ ಮಾಡದೆ, ತಕ್ಷಣವೇ ತನ್ನ ಮೇಲ್ವಿಚಾರಕ ಸೆಂತಮಿಜಾನ್‌ಗೆ ಮಾಹಿತಿ ತಿಳಿಸಿದ್ದಾರೆ. ಅವರು ಆ ನಾಣ್ಯವನ್ನು ಸತ್ಯಂಗಡು ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು. 

ವಿಚಾರಣೆಯ ನಂತರ, ನಾಣ್ಯವನ್ನು ಗಣೇಶ್ ರಾಮನ್ ಅವರಿಗೆ ಹಸ್ತಾಂತರಿಸಲಾಯಿತು ಮತ್ತು ಆಕೆಯ ಪ್ರಾಮಾಣಿಕತೆಗಾಗಿ ಸಂರಕ್ಷಣಾ ಕಾರ್ಯಕರ್ತೆ ಎಂದು ಪ್ರಶಂಸಿಸಲಾಗಿದೆ.

SCROLL FOR NEXT