ದೇಶ

ಕೋವಿಡ್ ನಿರ್ಬಂಧ ಮತ್ತಷ್ಟು ಸಡಿಲಿಸಿದ ಭಾರತ: ಈ 11 ದೇಶಗಳಿಂದ ಬರುವವರಿಗೆ ಕೋವಿಡ್ ಪರೀಕ್ಷೆ ಬೇಕಿಲ್ಲ!!

Srinivasamurthy VN

ನವದೆಹಲಿ: ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಕೋವಿಡ್ ಮಹಾಮಾರಿಯ ಅಬ್ಬರ ತಗ್ಗಿರುವ ಹಿನ್ನಲೆಯಲ್ಲಿ ಮತ್ತು ಕೋವಿಡ್ ಲಸಿಕೆ ವಿತರಣೆ ಗಮನಾರ್ಹ ಹಂತ ತಲುಪಿರುವ ಹಿನ್ನಲೆಯಲ್ಲಿ ಭಾರತ ಸರ್ಕಾರ ತನ್ನ ಕೋವಿಡ್ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಿದೆ.

ಹೌದು.. ಲಸಿಕೆ ಪರಸ್ಪರ ಗುರುತಿಸುವಿಕೆ ಕಾರ್ಯಕ್ರಮದ ಅಡಿಯಲ್ಲಿ ಇದೀಗ ಭಾರತ ಸರ್ಕಾರ ಒಟ್ಟು 11 ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ 11 ರಾಷ್ಟ್ರಗಳಿಂದ ಬರುವ ವಿಮಾನ ಪ್ರಯಾಣಿಕರಿಗೆ ಅಕ್ಟೋಬರ್ 25ರಿಂದ ಕೋವಿಡ್ ಪರೀಕ್ಷೆ ಅಥವಾಆರ್ ಟಿಪಿಸಿಆರ್ ಪರೀಕ್ಷೆ ಕಡ್ಡಾಯವಲ್ಲ. ಈ ನಿಯಮವನ್ನು ಭಾರತ ಸರ್ಕಾರ ಸಡಿಲಗೊಳಿಸಿಸಿದೆ. 

ಅಂತಾರಾಷ್ಟ್ರೀಯ ಆಗಮನದ ಹೊಸ ಮಾರ್ಗಸೂಚಿಗಳಲ್ಲಿ, ಭಾರತವು ಲಸಿಕೆ ಪ್ರಮಾಣಪತ್ರಗಳ ಪರಸ್ಪರ ಮಾನ್ಯತೆಯನ್ನು ಹೊಂದಿರುವ ದೇಶಗಳ ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಸರಾಗಗೊಳಿಸಿದ್ದು, ಹೊಸ ನಿಯಮಗಳು ಅಕ್ಟೋಬರ್ 25 ರಿಂದ ಆರಂಭವಾಗುತ್ತವೆ. ಹಿಂದಿನ ಎಲ್ಲಾ ನಿರ್ಬಂಧಗಳನ್ನು ಭಾರತ ಸರ್ಕಾರ ರದ್ದುಗೊಳಿಸಿದ್ದು, ಭಾರತವು ಪರಸ್ಪರ ಲಸಿಕೆ ಗುರುತಿಸುವಿಕೆಯ ಒಪ್ಪಂದವನ್ನು ಹೊಂದಿರುವ 11 ದೇಶಗಳ ಸಂಪೂರ್ಣ ಲಸಿಕೆ ಪಡೆದ ಪ್ರಯಾಣಿಕರ ಆಗಮನದ ಮೇಲಿನ ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಗಾಗುವ ಅಗತ್ಯವಿಲ್ಲ ಎಂದು ಹೇಳಿದೆ.  

ಭಾರತ ನಿರ್ಬಂಧ ಸಡಿಲಗೊಳಿಸಿರುವ ಈ 11 ರಾಷ್ಟ್ರಗಳ ಪಟ್ಟಿಯಸಲ್ಲಿ ಫ್ರಾನ್ಸ್, ಬ್ರಿಟನ್, ಜರ್ಮನಿ, ನೇಪಾಳ, ಬೆಲಾರಸ್, ಲೆಬನಾನ್, ಅರ್ಮೇನಿಯಾ, ಉಕ್ರೇನ್, ಬೆಲ್ಜಿಯಂ, ಹಂಗೇರಿ ಮತ್ತು ಸೆರ್ಬಿಯಾ  ದೇಶಗಳಿವೆ. ಈ ದೇಶಗಳ ಪ್ರಯಾಣಿಕರು, ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದರೆ (ಪ್ರಯಾಣದ ದಿನಕ್ಕೆ ಕನಿಷ್ಠ15 ದಿನಗಳ ಮೊದಲು), ವಿಮಾನ ನಿಲ್ದಾಣದಿಂದ ಹೊರಹೋಗಲು ಮತ್ತು ಬಂದ ನಂತರ 14 ದಿನಗಳವರೆಗೆ ತಮ್ಮ ಆರೋಗ್ಯವನ್ನು ಸ್ವಯಂ-ಮೇಲ್ವಿಚಾರಣೆ ಮಾಡಲು ಅನುಮತಿಸಲಾಗುತ್ತದೆ. ಆದಾಗ್ಯೂ, ವಿಮಾನ ಹತ್ತುವ ಮೊದಲು, ಅವರು ನಕಾರಾತ್ಮಕ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿ ಮತ್ತು ಲಸಿಕೆ ಪ್ರಮಾಣಪತ್ರಗಳನ್ನು ಏರ್ ಸುವಿಧಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ.

ಪ್ರತಿಯೊಬ್ಬರೂ ವರದಿಯ ಸತ್ಯಾಸತ್ಯತೆಯ ಬಗ್ಗೆ ಘೋಷಣೆಯನ್ನು ಸಲ್ಲಿಸಬೇಕು ಮತ್ತು ಇಲ್ಲದಿದ್ದರೆ ನಕಲಿ ದಾಖಲಾತಿ ಕಂಡುಬಂದಲ್ಲಿ ಕ್ರಿಮಿನಲ್ ಮೊಕದ್ದಮೆಗೆ ಹೊಣೆಗಾರರಾಗಿರುತ್ತಾರೆ. 11 ದೇಶಗಳಿಂದ ಭಾಗಶಃ ಅಥವಾ ಲಸಿಕೆ ಹಾಕಿಸದವರು ಕೋವಿಡ್ ಪರೀಕ್ಷೆಗೆ ಒಳಗಾಗಿ ಏಳು ದಿನಗಳ ಕಾಲ ಗೃಹ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಅವರು ಆಗಮಿಸಿದ ಎಂಟನೇ ದಿನದಂದು ಮರು ಪರೀಕ್ಷೆ ತೆಗೆದುಕೊಳ್ಳಬೇಕು, ಮತ್ತು ಫಲಿತಾಂಶವು ನಕಾರಾತ್ಮಕವಾಗಿದ್ದರೆ, ಮುಂದಿನ ಏಳು ದಿನಗಳವರೆಗೆ ಅವರ ಆರೋಗ್ಯವನ್ನು ಸ್ವಯಂ-ಮೇಲ್ವಿಚಾರಣೆ ಮಾಡಿಕೊಳ್ಳಬೇಕು. ಈ ಕ್ರಮಗಳು ಪ್ರಪಂಚದ ಇತರ ಭಾಗಗಳಿಂದ ಬರುವ ಎಲ್ಲಾ ಪ್ರಯಾಣಿಕರಿಗೂ ತಮ್ಮ ವ್ಯಾಕ್ಸಿನೇಷನ್ ಸ್ಥಿತಿಯ ಹೊರತಾಗಿಯೂ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.

SCROLL FOR NEXT