ದೇಶ

ಚೀನಾದ ಸೈಬರ್​ ತಂತ್ರಜ್ಞಾನ ಬೆಳವಣಿಗೆ ಅತ್ಯಂತ ಕಳವಳಕಾರಿ: ಬಿಪಿನ್ ರಾವತ್

Lingaraj Badiger

ಬೆಂಗಳೂರು: ಭಾರತವು ಅಸಂಖ್ಯಾತ ಬಾಹ್ಯ ಭದ್ರತಾ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಸೈಬರ್ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಚೀನಾದ ತಾಂತ್ರಿಕ ಪ್ರಗತಿಯು ಅತ್ಯಂತ ಚಿಂತಾಜನಕವಾಗಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಶುಕ್ರವಾರ ಹೇಳಿದ್ದಾರೆ.

1971ರ ಭಾರತ-ಪಾಕ್ ಯುದ್ಧದಲ್ಲಿ 50 ವರ್ಷಗಳ ವಿಜಯದ ನೆನಪಿಗಾಗಿ ಆಚರಿಸಲಾಗುತ್ತಿರುವ 'ಸ್ವರ್ಣಿಮ್ ವಿಜಯ್ ವರ್ಷ್' ಕಾರ್ಯಕ್ರಮದಲ್ಲಿ ಮಾತನಾಡಿದ ಬಿಪಿನ್ ರಾವತ್ ಅವರು, ಭಾರತವು ಅಸಂಖ್ಯಾತ ಬಾಹ್ಯ ಭದ್ರತಾ ಸವಾಲುಗಳನ್ನು ಪ್ರಾದೇಶಿಕ ಅಂತರ್​ ಸಂಪರ್ಕಗಳೊಂದಿಗೆ ಎದುರಿಸುತ್ತಿದೆ. ಪರಿಹರಿಸಲಾಗದ ಗಡಿ ವಿವಾದಗಳ ಪರಂಪರೆ, ಸ್ಪರ್ಧೆಯ ಸಂಸ್ಕೃತಿ ಮತ್ತು ಭಾರತದ ಕಾರ್ಯತಂತ್ರದ ಜಾಗವನ್ನು ದುರ್ಬಲಗೊಳಿಸುವ ಸವಾಲು ಎದುರಾಗಿದೆ ಎಂದು ತಿಳಿಸಿದರು.

ಸೈಬರ್ ಮತ್ತು ಬಾಹ್ಯಾಕಾಶ ಡೊಮೇನ್‌ಗಳಲ್ಲಿ ಚೀನಾದ ತಾಂತ್ರಿಕ ಪ್ರಗತಿಗಳು ಅತ್ಯಂತ ಕಳವಳಕಾರಿಯಾಗಿದ್ದು, ರಕ್ಷಣಾ ವ್ಯವಸ್ಥೆಯನ್ನು ಸೈಬರ್ ದಾಳಿಯಿಂದ ರಕ್ಷಿಸುವುದೇ ದೇಶದ ಮುಂದಿರುವ ದೊಡ್ಡ ಸವಾಲು ಎಂದು ಬಿಪಿನ್ ರಾವತ್ ಹೇಳಿದ್ದಾರೆ.

'ಯಾವುದೇ ಒಂದು ಕ್ಷೇತ್ರದ ಮೇಲೆ ಸೈಬರ್ ದಾಳಿ ನಡೆದರೂ ನಮ್ಮ ಯುದ್ಧ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಆಗುತ್ತದೆ. ರಕ್ಷಣಾ ವ್ಯವಸ್ಥೆ ಸೈಬರ್ ದಾಳಿಗೆ ಸಿಲುಕದಂತೆ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದಕ್ಕೆ ಪೂರಕವಾಗಿ ಭೂ ಸೇನೆ, ವಾಯು ಸೇನೆ ಮತ್ತು ನೌಕಾ ದಳಗಳು ಜಂಟಿಯಾಗಿ ಪ್ರಯತ್ನ ಆರಂಭಿಸಿವೆ' ಎಂದರು.

ಬ್ಯಾಂಕಿಂಗ್, ಸಾರಿಗೆ, ಇಂಧನ ಸೇರಿದಂತೆ ಯಾವುದೇ ಕ್ಷೇತ್ರವೂ ಸೈಬರ್ ದಾಳಿಯಿಂದ ತೊಂದರೆಗೆ ಸಿಲುಕಬಾರದು. ಎಲ್ಲ ಕ್ಷೇತ್ರಗಳು ಒಂದಕ್ಕೊಂದು ಪೂರಕವಾಗಿವೆ. ಪ್ರಮುಖ ಕ್ಷೇತ್ರಗಳ ಮೇಲೆ ನಡೆಯುವ ದಾಳಿಯು ಸೇನಾ ಪಡೆಗಳಿಗೂ ಅನಾನುಕೂಲ ಉಂಟುಮಾಡುತ್ತದೆ ಎಂದು ಅವರು ಹೇಳಿದರು.

SCROLL FOR NEXT