ದೇಶ

ಕ್ರೂಸ್ ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಗೆ ಇಂದೂ ಜಾಮೀನಿಲ್ಲ, ವಿಚಾರಣೆ ನಾಳೆಗೆ ಮುಂದೂಡಿಕೆ

Lingaraj Badiger

ಮುಂಬೈ: ಮುಂಬೈ ತೀರದಲ್ಲಿ ಕ್ರೂಸ್ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತಿಂಗಳ ಆರಂಭದಲ್ಲಿ ಬಂಧಿತರಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ಜಾಮೀನು ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಬುಧವಾರಕ್ಕೆ ಮುಂದೂಡಿದೆ.

ನ್ಯಾಯಾಲಯ ಈಗ ಪ್ರಕರಣದ ಸಹ-ಆರೋಪಿ ಅರ್ಬಾಜ್ ಮರ್ಚೆಂಟ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿದೆ.

ಆರ್ಯನ್ ಖಾನ್ ಜಾಮೀನಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಎನ್ ಸಿಬಿ, ಆರ್ಯನ್ ಖಾನ್ ಕೇವಲ ಡ್ರಗ್ಸ್ ಸೇವಿಸುವುದಲ್ಲದೆ ಡ್ರಗ್ಸ್ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಂಗಳವಾರ ಆರೋಪಿಸಿದೆ.

ಆರ್ಯನ್ ಖಾನ್ ಮತ್ತು ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಎಂಬ ಮಹಿಳೆ ತನಿಖೆಯ ದಾರಿತಪ್ಪಿಸುವ ಪ್ರಯತ್ನದಲ್ಲಿ ಪ್ರಕರಣದ ಸಾಕ್ಷಿ ಮತ್ತು ಸಾಕ್ಷ್ಯಗಳನ್ನು ತಿರುಚುತ್ತಿದ್ದಾರೆ ಎಂದು ಎನ್ ಸಿಬಿ ಬಾಂಬೆ ಹೈಕೋರ್ಟ್ ಗೆ ತಿಳಿಸಿದೆ.

ಮತ್ತೊಂದೆಡೆ, ಆರ್ಯನ್ ಖಾನ್ ಅವರ ವಕೀಲರು ಹೆಚ್ಚುವರಿ ಟಿಪ್ಪಣಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದು, ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಕೆಲವು ರಾಜಕೀಯ ವ್ಯಕ್ತಿಗಳ ನಡುವಿನ ಆರೋಪ, ಪ್ರತ್ಯಾರೋಪಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಆರ್ಯನ್ ಖಾನ್ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಜಾಮೀನು ಅರ್ಜಿಗೆ ಪ್ರತಿಕ್ರಿಯೆಯಾಗಿ ಎನ್‌ಸಿಬಿ ಇಂದು ತನ್ನ ಅಫಿಡವಿಟ್ ಸಲ್ಲಿಸಿದೆ ಮತ್ತು ಪ್ರಕರಣದ ತನಿಖೆಯ ದಾರಿತಪ್ಪಿಸುವ ದುರುದ್ದೇಶದಿಂದ ತನಿಖೆಯನ್ನು ಹಾಳು ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಡ್ರಗ್ಸ್ ನಿಗ್ರಹ ಸಂಸ್ಥೆ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.

SCROLL FOR NEXT