ದೇಶ

ಗೋವಾ ಭೇಟಿಗೂ ಮುನ್ನ ಮಮತಾ ಬ್ಯಾನರ್ಜಿ ಪೋಸ್ಟರ್ ಧ್ವಂಸ; ಕೃತ್ಯ ಖಂಡಿಸಿದ ಟಿಎಂಸಿ

Lingaraj Badiger

ಪಣಜಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕರಾವಳಿ ರಾಜ್ಯಕ್ಕೆ ಭೇಟಿ ನೀಡುವ ಮುನ್ನ ಗೋವಾದಲ್ಲಿ ಹಾಕಲಾಗಿದ್ದ ದೀದಿಯ ಹಲವಾರು ಹೋರ್ಡಿಂಗ್‌ಗಳನ್ನು ವಿರೂಪಗೊಳಿಸಲಾಗಿದೆ. ತೃಣಮೂಲ ಕಾಂಗ್ರೆಸ್(ಟಿಎಂಸಿ) ಈ ಕೃತ್ಯವನ್ನು ಬುಧವಾರ ತೀವ್ರವಾಗಿ ಖಂಡಿಸಿದೆ ಮತ್ತು ಇದು ಬಿಜೆಪಿಯ "ಅಸಹಿಷ್ಣುತೆ"ಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ.

ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಗೋವಾಗೆ ಭೇಟಿ ನೀಡಲಿದ್ದಾರೆ.

ಗೋವಾ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಟಿಎಂಸಿ ಈಗಾಗಲೇ ಘೋಷಿಸಿದೆ. ಹೀಗಾಗಿ ಮಮತಾ ಬ್ಯಾನರ್ಜಿ ಅವರನ್ನು ಸ್ವಾಗತಿಸಿಲು ಅವರ ಭಾವಚಿತ್ರವಿರುವ ಹಲವು ಹೋರ್ಡಿಂಗ್‌ಗಳನ್ನು ಹಾಕಲಾಗಿತ್ತು. ಆದರೆ ಕಿಡಿಗೇಡಿಗಳು ಅವುಗಳನ್ನು ಧ್ವಂಸಗೊಳಿಸಿದ್ದಾರೆ.

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ತಮ್ಮ ಕಾಲಿನ ಕೆಳಗೆ ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಕಾರ್ಟೂನ್ ಅನ್ನು ತೃಣಮೂಲ ಕಾಂಗ್ರೆಸ್‌ನ ಗೋವಾ ಘಟಕ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ ಎಂದು ಬಿಜೆಪಿ ಭಾನುವಾರ ಆರೋಪಿಸಿತ್ತು.

ಟಿಎಂಸಿ ಮಾಡಿದ ಟ್ವೀಟ್ ಅನ್ನು ತಕ್ಷಣವೇ ಡಿಲೀಟ್ ಮಾಡಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.

ನಂತರ, ಕರಾವಳಿ ರಾಜ್ಯದಲ್ಲಿ ಟಿಎಂಸಿ ಹಾಕಿದ್ದ ಮಮತಾ ಬ್ಯಾನರ್ಜಿ ಅವರ ಭಾವಚಿತ್ರಗಳನ್ನು ಹೊಂದಿದ್ದ ಹಲವಾರು ಪೋಸ್ಟರ್‌ಗಳು ಮತ್ತು ಹೋರ್ಡಿಂಗ್‌ಗಳನ್ನು ಧ್ವಂಸಗೊಳಿಸಲಾಗಿದೆ.

SCROLL FOR NEXT