ದೇಶ

'ಇಲ್ಲಿ ಯಾರಾದ್ರೂ ಕುಡಿಯುತ್ತೀರಾ?' ರಾಹುಲ್ ಗಾಂಧಿ ಪ್ರಶ್ನೆಗೆ ಹಿರಿಯ ನಾಯಕರು ಗಪ್ ಚುಪ್!

Vishwanath S

ನವದೆಹಲಿ: ರಾಹುಲ್ ಗಾಂಧಿ ಕಾಂಗ್ರೆಸ್ ನಲ್ಲಿ ಪ್ರಶ್ನಾತೀತ ನಾಯಕ. ಅವರು ಏನೇ ಹೇಳಿದ್ರೂ. ಏನೇ ಕೇಳಿದ್ರೂ ಆ ವಿಷಯಗಳು ಪತ್ರಿಕೆಗಳ ಹಣೆಬರಹ ಆಗಿರುತ್ತವೆ. ಏಕೆಂದರೆ ರಾಹುಲ್ ಗಾಂಧಿ ಸ್ವಾತಂತ್ರ್ಯ ಪೂರ್ವದಿಂದ ಇರೋ ಪಕ್ಷದ ನಾಯಕ. ಅವರ ಮಾತುಗಳಿಗೆ ಕಾಂಗ್ರೆಸ್ ಪಾಳಯದಲ್ಲಿ ಹೆಚ್ಚಿನ ಮಹತ್ವ ಇರುತ್ತೆ.

ಮುಂಬರುವ ರಾಜ್ಯ ಚುನಾವಣೆಗಳಿಗೆ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಬೇಕು; ಕಾಂಗ್ರೆಸ್ ಪಕ್ಷ ಮತ್ತೆ ಗತಕಾಲದ ವೈಭವ ಮೆತ್ತಿಕೊಳ್ಳಬೇಕು ಅನ್ನೋದು ರಾಹುಲ್ ಕನಸು. ಸದ್ಯದಲ್ಲೇ ಎದುರಾಗುವ ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷ ಗೆಲ್ಲಿಸಿಕೊಂಡು ಬರಬೇಕು ಹಾಗೂ ಲೋಕಸಭಾ ಚುನಾವಣೆಗೆ ಸಜ್ಜುಗೊಳ್ಳಬೇಕು ಅನ್ನೋದು ಕಾಂಗ್ರೆಸ್ ಯುವನಾಯಕನ ಅಭಿಲಾಷೆ.

ಪಕ್ಷ ಸಂಘಟನೆ ಹಾಗೂ ಚುನಾವಣೆ ರಣತಂತ್ರ ಕುರಿತಂತೆ ನಿನ್ನೆ ನವದೆಹಲಿಯಲ್ಲಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಿತು. ದೇಶದ ವಿವಿಧ ರಾಜ್ಯಗಳ ಕಾಂಗ್ರೆಸ್ ಪಾರ್ಟಿಯ ಮುಖ್ಯಸ್ಥರು ಮಹತ್ವಪೂರ್ಣ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದರು.

"ಇಲ್ಲಿ ಯಾರಾದ್ರೂ ಕುಡಿಯುತ್ತಿರಾ?" ಅನ್ನೋ ಪ್ರಶ್ನೆ ಗಹನವಾಗಿ ನಡೆಯುತ್ತಿದ್ದ ಸಭೆಯಲ್ಲಿ ತೂರಿ ಬಂತು. ಯಾರಪ್ಪಾ ಇಂಥ ಪ್ರಶ್ನೆ ಕೇಳಿದ್ದು ಅಂತಾ ಪಕ್ಷದ ನಾಯಕರು ಗುಸುಗುಸು ಮಾತನಾಡಿಕೊಳ್ಳಲು ಆರಂಭಿಸಿದರು. ಪ್ರಶ್ನೆ ಮಾಡಿರೋದು ರಾಹುಲ್ ಗಾಂಧಿ ಅಂತಾ ಗೊತ್ತಾದ ಮೇಲೆ ಪಕ್ಷದ ಎಲ್ಲಾ ಮುಖಂಡರು ಗಪ್ ಚುಪ್ ಆಗಿಬಿಟ್ಟರು.

ಯಾಕೆ ಸುಮ್ನೆ ಗ್ರಹಚಾರ.? ಸದ್ಯ ಟೈಮ್ ಸರಿಯಾಗಿಲ್ಲ ಅಂತಾ ಪಕ್ಷದ ಮುಖಂಡರು ತಮ್ಮ ತಮ್ಮಲ್ಲಿ ಪಿಸುಪಿಸು ಮಾತು ಮುಂದುವರಿಸಿದರು. ಈ ವೇಳೆ ಮಾತಿನ ಸರದಾರ, ಪಂಜಾಬ್ ಕಾಂಗ್ರೆಸ್ ಪಕ್ಷದ ಮುಖಂಡ ನವಜೋತ್ ಸಿಂಗ್ ಸಿದು, "ಕುಡಿಯುತ್ತಾರೆ. ಹೆಚ್ಚಿನ ಜನ ನಮ್ಮ ರಾಜ್ಯದಲ್ಲಿ ಕುಡಿಯುತ್ತಾರೆ" ಅಂತಾ ರಾಹುಲ್ ಪ್ರಶ್ನೆಗೆ ಉತ್ತರ ಕೊಟ್ಟರು.

ಈ ಥರದ ಪ್ರಶ್ನೆಯನ್ನು 2007ರಲ್ಲಿ ರಾಹುಲ್ ಗಾಂಧಿ, ಪಕ್ಷದ ಮಹತ್ವದ ಸಭೆಯಲ್ಲಿ ಎತ್ತಿದ್ದರು. ಕಾಂಗ್ರೆಸ್ ಮದ್ಯಪಾನ ವಿರೋಧಿ ಹಾಗೂ ಖಾದಿ ಬಟ್ಟೆಗಳ ಬಳಕೆಯ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ತನ್ನನ್ನು ಗುರುತಿಸಿಕೊಳ್ಳುತ್ತದೆ. ಆದ್ರೆ ಇತ್ತೀಚೆಗೆ ಮಹಾತ್ಮ ಗಾಂಧೀಜಿಯವರ ಈ ಮಹತ್ವದ ಘೋಷಣೆಗಳ ಬಗ್ಗೆ ಕಾಂಗ್ರೆಸ್ ಹೆಚ್ಚು ಕಾಳಜೀವಹಿಸುತ್ತಿಲ್ಲ. ಆದ್ರೆ ನಿನ್ನೆಯ ರಾಹುಲ್ ಗಾಂಧಿ ಅವರ ಈ ಪ್ರಶ್ನೆ, ಪಕ್ಷದ ಸಭೆಯಲ್ಲಿ ಮಹತ್ವವನ್ನು ಪಡೆದುಕೊಂಡಿತು.

ಇನ್ನೇನು ಕೆಲವೇ ದಿನಗಳಲ್ಲಿ ಪಕ್ಷಕ್ಕೆ ಸದಸ್ಯರ ನೋಂದಣಿ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಲಿದೆ. ಈ ವೇಳೆ ಮಾದಕ ಹಾಗೂ ಮದ್ಯಪಾನದ ಬಗ್ಗೆ ಕಾಲಂನ್ನು ನೋಂದಣಿ ಅರ್ಜಿಯಲ್ಲಿ ಅಳವಡಿಸಿಕೊಳ್ಳುತ್ತೇವೆ. ಈ ಬಗ್ಗೆ ಪಕ್ಷದ ಉನ್ನತ ಮಂಡಳಿ ನಿರ್ಧಾರ ಕೈಗೊಳ್ಳಲಿದೆ ಅಂತಾ ರಾಹುಲ್ ಗಾಂಧಿ ಹೇಳಿದರು. ಅಲ್ಲದೆ, ಈ ಅರ್ಜಿಯಲ್ಲಿ ಪಕ್ಷದ ವಿರುದ್ಧವಾಗಿ ಬಹಿರಂಗವಾಗಿ ಮಾತನಾಡಬಾರದು ಅನ್ನೋ ಅಂಶವನ್ನೂ ಸಹ ಅಳವಡಿಸಿಕೊಳ್ಳಲಾಗುವುದು ಅಂತಾ ಪಕ್ಷದ ಮುಖಂಡ ರಣದೀಪ್ ಸುರ್ಜೇವಾಲ್ ಸಭೆ ನಂತರ ತಿಳಿಸಿದರು.

SCROLL FOR NEXT