ದೇಶ

ಕಾಬೂಲ್‌ನ ಭಾರತೀಯ ರಾಯಭಾರಿ ಕಚೇರಿ ಸುರಕ್ಷಿತವಾಗಿದ್ದು, ಸಿಬ್ಬಂದಿಗೆ ವೇತನವೂ ಪಾವತಿಯಾಗುತ್ತಿದೆ: ವಿದೇಶಾಂಗ ಸಚಿವಾಲಯ

Manjula VN

ನವದೆಹಲಿ: ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರಿ ಸಿಬ್ಬಂದಿಗೆ ಯಾವುದೇ ಸಮಸ್ಯೆ ಆಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದು, ಸಮಯಕ್ಕೆ ಸರಿಯಾಗಿ ವೇತನ ಕೂಡ ಪಾವತಿಯಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಸ್ಪಷ್ಟಪಡಿಸಿದೆ.

ತಾಲಿಬಾನ್‌ ಆಡಳಿತಕ್ಕೆ ಸಜ್ಜಾಗಿರುವ ಅಫ್ಘಾನ್‌ ರಾಜಧಾನಿ ಕಾಬೂಲ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿ ಇದ್ದು, ರಾಯಭಾರಿ ಕಚೇರಿ ಸುರಕ್ಷಿತವಾಗಿದ್ದು, ರಾಯಭಾರಿ ಕಚೇರಿ ಸಿಬ್ಬಂದಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಾಬೂಲ್‌ನಲ್ಲಿರುವ ರಾಯಭಾರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದೆ. ಅಲ್ಲಿರುವ ನಮ್ಮ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಅಫ್ಘಾನ್‌ನಲ್ಲಿ ಸದ್ಯ ಉಂಟಾಗಿರುವ ಬಿಕ್ಕಟ್ಟಿನಿಂದ ಅಲ್ಲಿನ ಬ್ಯಾಂಕುಗಳ ಸೇವೆ ಸ್ಥಗಿತವಾಗಿದೆ. 

ಹಣ ಡ್ರಾ ಮಾಡಿಕೊಳ್ಳಲು ರಾಯಭಾರಿ ಸಿಬ್ಬಂದಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಹಲವು ಭಾರತೀಯರು ಕಾಬೂಲ್‌ನಿಂದ ವಾಪಸ್‌ ಆಗಿದ್ದಾರೆ. ಅಲ್ಲಿರುವ ನಮ್ಮ ಸಿಬ್ಬಂದಿ ಏರ್‌ಲಿಫ್ಟ್‌ಗೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆದರೆ ಕಾಬೂಲ್‌ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ವಿಮಾನಗಳ ಹಾರಾಟವನ್ನು ತಾಲಿಬಾನ್‌ಗಳು ರದ್ದು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಕಾಬೂಲ್‌ನಲ್ಲಿ ಸಿಲುಕಿರುವ ಉಳಿದ ಭಾರತೀಯರನ್ನು ವಾಪಸ್‌ ಕರೆ ತರಲು ಮತ್ತೆ ಸ್ಥಳಾಂತರ ಕಾರ್ಯಾಚರಣೆ ಶೀಘ್ರವೇ ಆರಂಭಿಸುವ ಸಾಧ್ಯತೆ ಇದೆ. ಈ ವಿಚಾರವಾಗಿ ಸರ್ಕಾರ ಕಾಬೂಲ್‌ ಹಾಗೂ ಅಲ್ಲಿನ ರಾಯಭಾರಿ ಸಿಬ್ಬಂದಿ ಜೊತೆ ಸಂಪರ್ಕದಲ್ಲಿ ಇದ್ದೇವೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಆದರೆ, ಪ್ರಸ್ತುತ ಎಷ್ಟು ಮಂದಿ ಭಾರತೀಯರು ಕಾಬೂಲ್‌ನಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ನೀಡಿಲ್ಲ. 

ಉಳಿದವರನ್ನು ಕರೆತರಲು ತಾಲಿಬಾನ್‌ ಸರ್ಕಾರದ ಜೊತೆ ಭಾರತ ಹೇಗೆ ವ್ಯವಹಾರ ನಡೆಸುತ್ತೆ ಎಂಬುದರ ಮೇಲೆ ಮುಂದಿನ ನಿರ್ಧಾರವಾಗುತ್ತೆ ಎಂದು ಮೂಲಗಳು ತಿಳಿಸಿವೆ.

ಕಾಬೂಲ್‌, ದುಶಾಂಬೆ ವಿಮಾನ ನಿಲ್ದಾಣದ ಮೂಲಕ ಈವರೆಗೆ 550 ಮಂದಿಯನ್ನು ಕೇಂದ್ರ ಸರ್ಕಾರ ಸ್ಥಳಾಂತರಿಸಿದೆ. ಇದರಲ್ಲಿ 260 ಮಂದಿ ಭಾರತೀಯ ಇದ್ದಾರೆ. ಇತರ ದೇಶಗಳ ಏಜೆನ್ಸಿಗಳ ಮೂಲಕವೂ ಭಾರತೀಯರನ್ನು ಏರ್‌ಲಿಫ್ಟ್ ಮಾಡುವ ಕೆಲಸವನ್ನು ಸರ್ಕಾರ ಮಾಡಿದೆ. ಅಮೆರಿಕಾ, ತಜಿಕಿಸ್ತಾನ ಸೇರಿದಂತೆ ಇತರ ದೇಶಗಳ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರರು ಈ ಹಿಂದೆ ತಿಳಿಸಿದ್ದರು.

SCROLL FOR NEXT