ದೇಶ

ಸೆಪ್ಟೆಂಬರ್ ನಲ್ಲಿ ಪ್ರಧಾನಿ ಮೋದಿ ಅಮೆರಿಕ ಭೇಟಿ ಸಾಧ್ಯತೆ

Srinivas Rao BV

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ ಮಾಸಾಂತ್ಯಕ್ಕೆ ಅಮೆರಿಕಾಗೆ ಭೇಟಿ ನೀಡುವ ಸಾಧ್ಯತೆ ಇದೆ. 

ಈ ವರೆಗೂ ಮೋದಿ ಅವರ ಅಮೆರಿಕ ಭೇಟಿ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲವಾದರೂ ಎಎನ್ಐ ವರದಿಯ ಪ್ರಕಾರ ಇದಕ್ಕಾಗಿ ತಯಾರಿಗಳು ನಡೆಯುತ್ತಿವೆಯಂತೆ. ಈ ಬೆಳವಣಿಗೆಗಳ ಬಗ್ಗೆ ಅರಿವಿರುವ ಮಾಹಿತಿಯ ಪ್ರಕಾರ ವೇಳಾಪಟ್ಟಿ ಇನ್ನಷ್ಟೇ ನಿಗದಿಯಾಗಬೇಕಿದೆ. 

ತಾತ್ಕಾಲಿಕ ಯೋಜನೆಯ ಪ್ರಕಾರ ಸೆ.23-24 ರಂದು ಮೋದಿ ಅಮೆರಿಕಾಗೆ ಭೇಟಿ ನೀಡಲಿದ್ದಾರೆ. 2019 ರಲ್ಲಿ ಮೋದಿ ಅಮೆರಿಕಾಗೆ ಭೇಟಿ ನೀಡಿ ಹೌಸ್ಟನ್ ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದರು. 

ವಾಷಿಂಗ್ ಟನ್ ಭೇಟಿಯ ನಂತರ ಮೋದಿ ನ್ಯೂಯಾರ್ಕ್ ಗೆ ತೆರಳಲಿದ್ದು ಅಲ್ಲಿ ಉನ್ನತ ಮಟ್ಟದ ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಶಾಶ್ವತವಲ್ಲದ ಸದಸ್ಯನಾಗಿದ್ದು ತಿಂಗಳ ಅವಧಿಯ ಅಧ್ಯಕ್ಷತೆ ಇತ್ತೀಚೆಗಷ್ಟೇ ಅಂತ್ಯಗೊಂಡಿದೆ. 

ಯುಎನ್ ಜಿಎ ಸಭೆಯಲ್ಲಿ ಇತ್ತೀಚೆಗಷ್ಟೇ ಉಗ್ರ ಸಂಘಟನೆ ತಾಲೀಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವುದು ಚರ್ಚೆಯ ಪ್ರಮುಖ ವಸ್ತುವಾಗಿರಲಿದೆ. ಮೋದಿ ಈ ಬಾರಿ ಅಮೆರಿಕಾಗೆ ತೆರಳಿದರೆ ಜೋ ಬೈಡನ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೈಡನ್-ಮೋದಿ ಮೊದಲ ಭೇಟಿ ಇದಾಗಿರಲಿದೆ. 

SCROLL FOR NEXT